ಚಂದ್ರವಳ್ಳಿ ನ್ಯೂಸ್, ನವದೆಹಲಿ:
ರಾಜ್ಯ ರಾಜಕೀಯದಲ್ಲಿ ಸಚಿವರನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಷನ್ ನಡೆಸಲಾಗುತ್ತಿದ್ದು, ಎಲ್ಲರೂ ಎಚ್ಚರಿಕೆಯಿಂದಿರಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ, ಖುದ್ದು ತಮ್ಮ ವಿರುದ್ಧವೂ ಸ್ಟಿಂಗ್ ಆಪರೇಷನ್ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಅವರು ದೆಹಲಿಯಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿಯಾದ ಬಳಿಕ ಕೆಲವರು ತಮ್ಮನ್ನೇ ಟ್ರ್ಯಾಪ್ ಮಾಡಲು ಪ್ರಯತ್ನಿಸಿದ್ದರು ಎಂದು ತಿಳಿಸಿರುವ ಅವರು, ಈ ಕುರಿತು ತಮ್ಮ ಬಳಿ ಎಲ್ಲ ರೀತಿಯ ಸಾಕ್ಷ್ಯಾಧಾರಗಳೂ ಇವೆ ಎಂದಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ, ಸುಮ್ಮನೆ ಮಾತನಾಡುವುದಿಲ್ಲ
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, "ನಾನು ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತಿರುವುದರಿಂದ ಸುಮ್ಮನೆ ಮಾತನಾಡುವುದಿಲ್ಲ. ನನ್ನ ಬಳಿಗೂ ಕೆಲವರು ಜಿಎಸ್‌ಟಿ ಹಾಗೂ ಇತರೆ ವಿಚಾರಗಳನ್ನು ಮಾತನಾಡಲು ಬಂದು, ನನ್ನಿಂದಲೇ ಈ ಸ್ಟಿಂಗ್ ಆಪರೇಷನ್ ಆರಂಭಿಸಲು ಯತ್ನಿಸಿದ್ದರು" ಎಂದು ಹೇಳಿದರು.
ಮುಂಚಿತವಾಗಿಯೇ ಸಿಕ್ಕ ಮಾಹಿತಿ: ಮುಖಂಡರ ಚಲನವಲನಗಳ ಮೇಲೆ ಅನುಮಾನ ಬಂದ ಹಿನ್ನೆಲೆಯಲ್ಲಿ, ಪೊಲೀಸರ ಮೂಲಕ ಸಂಪೂರ್ಣ ಮಾಹಿತಿ ಪಡೆದು ಎಲ್ಲಾ ದಾಖಲೆಗಳು ಹಾಗೂ ಫೋಟೋಗಳನ್ನು ಸಿದ್ಧಪಡಿಸಿಟ್ಟುಕೊಂಡಿದ್ದೇನೆ. ಅಗತ್ಯಬಿದ್ದರೆ ಫೋಟೋಗಳನ್ನು ಬಿಡುಗಡೆ ಮಾಡುತ್ತೇನೆ ಎಂದರು.
ಪಿತಾಮಹ ಯಾರು ಎಂಬುದು ಗೊತ್ತು: ಈ ಷಡ್ಯಂತ್ರದ ಹಿಂದೆ ಯಾರ್ಯಾರಿದ್ದಾರೆ, ಯಾರು ಇದಕ್ಕೆ ಹಣಕಾಸು ಒದಗಿಸುತ್ತಿದ್ದಾರೆ ಇದರ ಮುಖ್ಯ ರೂವಾರಿ (ಪಿತಾಮಹ) ಯಾರು ಎಂಬುದು ನನಗೆ ಸ್ಪಷ್ಟವಾಗಿ ತಿಳಿದಿದೆ. ಕುಂಬಳಕಾಯಿ ಕಳ್ಳ ಎಂದರೆ ಕೆಲವರು ಹೆಗಲು ಮುಟ್ಟಿಕೊಳ್ಳುತ್ತಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
ಹಳೇ ಅನುಭವ: 2000ನೇ ಇಸವಿಯ ಆಸುಪಾಸಿನಲ್ಲೂ ನನ್ನ ವಿರುದ್ಧ ಇಂತಹ ಷಡ್ಯಂತ್ರಗಳು ನಡೆದಿದ್ದವು. ಸುಖಾಸುಮ್ಮನೆ ಟ್ರ್ಯಾಪ್ ಮಾಡಲು ಜನರು ಬರುತ್ತಾರೆ, ಎಚ್ಚರಿಕೆಯಿಂದಿರಿ ಎಂದು ನಮ್ಮ ಅಧಿಕಾರಿಗಳು ಹಾಗೂ ಸಚಿವರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು. ಇದರಲ್ಲಿ ಕರ್ನಾಟಕದವರೇ ಇದ್ದಾರಾ ಅಥವಾ ಹೊರರಾಜ್ಯದವರಾ ಎಂಬ ವಿವರಗಳನ್ನು ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದರು.
ಎಸ್.ಐ.ಆರ್. ಫಾರ್ಮ್-7 ದುರ್ಬಳಕೆ: ಹೈಕಮಾಂಡ್‌ಗೆ ದಾಖಲೆ ಸಲ್ಲಿಕೆ ಚುನಾವಣಾ ಆಯೋಗದ ಎಸ್.ಐ.ಆರ್ ಪ್ರಕ್ರಿಯೆಯಲ್ಲಿ 'ಫಾರ್ಮ್-7' ಅನ್ನು ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ಇದು ಹೇಗೆ ಅಕ್ರಮವಾಗಿದೆ ಎಂಬ ಸಂಪೂರ್ಣ ದಾಖಲೆಗಳನ್ನು ತಮ್ಮೊಂದಿಗೆ ದೆಹಲಿಗೆ ತಂದಿರುವುದಾಗಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಈ ಕುರಿತು ಕಾಂಗ್ರೆಸ್ ವರಿಷ್ಠರಿಗೆ ಮಾಹಿತಿ ನೀಡುವುದಾಗಿ ಹೇಳಿದ ಅವರು, ಈ ಅಕ್ರಮದಲ್ಲಿ ರಾಜ್ಯಪಾಲರನ್ನು ಭೇಟಿಯಾದ ಕೆಲವು ನಾಯಕರೇ ಭಾಗಿಯಾಗಿದ್ದು, ತಮ್ಮ ಹೆಸರು ಬಯಲಿಗೆ ಬರುತ್ತದೆ ಎಂಬ ಕಾರಣಕ್ಕೆ ತನಿಖೆ ಬೇಡ ಎನ್ನುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ಕಾಂಗ್ರೆಸ್ ನಾಯಕರ ಮೇಲೆ ನಡೆದ ಪೊಲೀಸರ ದಾಳಿಯನ್ನು ಅವರು ಅಮಾನವೀಯ ಎಂದು ತೀವ್ರವಾಗಿ ಖಂಡಿಸಿದರು.
ಜಿಎಸ್‌ಟಿ ಸಭೆಯಲ್ಲಿ ರಾಜ್ಯದ ಹಿತದೃಷ್ಟಿಯಿಂದ ಅಗತ್ಯವಿರುವ ಪ್ರಮುಖ ಮಾಹಿತಿಗಳನ್ನು ಮಂಡಿಸುವುದಾಗಿಯೂ ಅವರು ತಿಳಿಸಿದರು.
ಸ್ಟಿಂಗ್ ಆಪರೇಷನ್ ವಿರುದ್ಧ ಬಿವೈ ವಿಜಯೇಂದ್ರ ತಿರುಗೇಟು
ಡಿ.ಕೆ. ಶಿವಕುಮಾರ್ ಅವರ ಸ್ಟಿಂಗ್ ಆಪರೇಷನ್ ಎಚ್ಚರಿಕೆಯ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬಾಗಲಕೋಟೆಯಲ್ಲಿ ತಿರುಗೇಟು ನೀಡಿದ್ದಾರೆ. ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಯಾರು ಸ್ಟಿಂಗ್ ಆಪರೇಷನ್ ಮಾಡುತ್ತಿದ್ದಾರೆ ಎಂಬುದು ರಾಜ್ಯದ ಜನರಿಗೆ ಚೆನ್ನಾಗಿ ಗೊತ್ತಿದೆ. ತಮ್ಮ ಶಾಸಕರ ಮೇಲೆಯೇ ಸ್ಟಿಂಗ್ ಮಾಡುತ್ತಾರೋ, ಡಿಂಗ್ ಡಿಂಗ್ ಆಪರೇಷನ್ ಯಾರು ಮಾಡಿದ್ದಾರೆ ಎಂಬುದೂ ನಮಗೆ ತಿಳಿದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.




