ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಸಾಮಾಜಿಕ ಜಾಲತಾಣಗಳಲ್ಲಿ ದಿನಬೆಳಗಾದರೆ ವಿರೋಧ ಪಕ್ಷಗಳಿಗೆ ‘ಫ್ಯಾಕ್ಟ್ ಚೆಕ್’ ಪಾಠ ಮಾಡುವ ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಒಮ್ಮೆ ನಿಮ್ಮದೇ ಸರ್ಕಾರದ 'ರಿಯಾಲಿಟಿ ಚೆಕ್' ಮಾಡಿಕೊಳ್ಳಿ!" ಎಂದು ಜೆಡಿಎಸ್ ತೀವ್ರ ವಾಗ್ದಾಳಿ ನಡೆಸಿದೆ. ರಾಜ್ಯದಲ್ಲಿ ಮಾದಕವಸ್ತು ಜಾಲ (ಡ್ರಗ್ಸ್ ದಂಧೆ) ರಾಜಾರೋಷವಾಗಿ ನಡೆಯುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಆಕ್ರೋಶ ಹೊರಹಾಕಿದೆ.
ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಡ್ರಗ್ಸ್ ನಿಗ್ರಹ ಪಡೆಯ ದುಸ್ಥಿತಿಯ ಕುರಿತು ಜೆಡಿಎಸ್ ಮಾಡಿರುವ ಗಂಭೀರ ಆರೋಪಗಳ ವಿವರ:
‘ಮಾದಕವಸ್ತು ನಿಗ್ರಹ ಪಡೆ ಈಗ ಹಲ್ಲಿಲ್ಲದ ಹಾವು’:
ರಾಜ್ಯದಲ್ಲಿ ಶಾಲಾ-ಕಾಲೇಜುಗಳ ಮುಂಭಾಗದಲ್ಲೇ ಡ್ರಗ್ಸ್ ಮುಕ್ತವಾಗಿ ಮಾರಾಟವಾಗುತ್ತಿದ್ದರೂ ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜೆಡಿಎಸ್ ದೂರಿದೆ.
"ಮಾದಕವಸ್ತು ಜಾಲವನ್ನು ತಡೆಯಬೇಕಾದ ಆ್ಯಂಟಿ ನಾರ್ಕೋಟಿಕ್ಸ್ ಟಾಸ್ಕ್ ಫೋರ್ಸ್ ಪಡೆಗೆ ಕನಿಷ್ಠ ಎಫ್‌ಐಆರ್ ದಾಖಲಿಸುವ ಅಧಿಕಾರವನ್ನೂ ನೀಡದೆ, ಅದನ್ನು ಕೇವಲ 'ಹಲ್ಲಿಲ್ಲದ ಹಾವು' ತರಹ ಮಾಡಿದ್ದೀರಿ. ನಿಮ್ಮ ಹೆಮ್ಮೆಯ 'ಬ್ರ್ಯಾಂಡ್ ಬೆಂಗಳೂರು' ಅಂದರೆ ಇದೇನಾ?" ಎಂದು ಜೆಡಿಎಸ್ ಲೇವಡಿ ಮಾಡಿದೆ.
9 ತಿಂಗಳಾದರೂ ಕಾಯಂ ಮುಖ್ಯಸ್ಥರಿಲ್ಲ!:
ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸಲು ರಾತ್ರೋರಾತ್ರಿ 'ಫ್ಯಾಕ್ಟ್ ಚೆಕ್ ಯೂನಿಟ್' ಸ್ಥಾಪನೆ ಮಾಡಲು ಕೋಟಿ ಕೋಟಿ ರೂಪಾಯಿ ಹಣ ಸುರಿಯುವ ಕಾಂಗ್ರೆಸ್ ಸರ್ಕಾರಕ್ಕೆ, ನಾಡಿನ ಮಕ್ಕಳ ಭವಿಷ್ಯದ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲದಿರುವುದು ದುರಂತ ಎಂದು ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ. ಮಾದಕವಸ್ತು ನಿಗ್ರಹ ಪಡೆಗೆ ಒಬ್ಬ ಕಾಯಂ ಮುಖ್ಯಸ್ಥರನ್ನು ಹಾಗೂ ಅಗತ್ಯ ಸಿಬ್ಬಂದಿಯನ್ನು ನೇಮಿಸಲು ಕಳೆದ 9 ತಿಂಗಳುಗಳಿಂದ ಸಾಧ್ಯವಾಗದಿರುವುದು ಇಡೀ ರಾಜ್ಯವೇ ತಲೆತಗ್ಗಿಸುವ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದೆ.
ಟ್ವಿಟರ್ ಬಿಟ್ಟು ಗ್ರೌಂಡ್ ರಿಯಾಲಿಟಿಗೆ ಬನ್ನಿ:
ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ನೇರ ಎಚ್ಚರಿಕೆ ನೀಡಿರುವ ಜೆಡಿಎಸ್, "ಟ್ವಿಟರ್‌ನಲ್ಲಿ ಕುಳಿತು ವಿರೋಧ ಪಕ್ಷಗಳಿಗೆ ಉಪದೇಶ ನೀಡುವುದನ್ನು ಮೊದಲು ನಿಲ್ಲಿಸಿ. ನೆಲದ ವಾಸ್ತವವನ್ನು ಅರಿತುಕೊಂಡು, ರಾಜ್ಯದ ಯುವ ಪೀಳಿಗೆಯನ್ನು ಬಲಿ ತೆಗೆದುಕೊಳ್ಳುತ್ತಿರುವ ಡ್ರಗ್ಸ್ ದಂಧೆಯನ್ನು ಸಂಪೂರ್ಣವಾಗಿ ಮಟ್ಟ ಹಾಕುವತ್ತ ಗಮನಹರಿಸಿದರೆ ನಾಡಿಗೆ ಒಳಿತಾಗುತ್ತದೆ" ಎಂದು ಸಲಹೆ ನೀಡಿದೆ.
ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಡ್ರಗ್ಸ್ ಜಾಲ ಯುವ ಸಮುದಾಯವನ್ನು ಕಬಳಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆತಂಕ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಜೆಡಿಎಸ್ ನಡೆಸಿರುವ ಈ ‘ರಿಯಾಲಿಟಿ ಚೆಕ್’ ದಾಳಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಂದು ಸುತ್ತಿನ ಮುಜುಗರ ತಂದಿಟ್ಟಿದೆ.



