ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ನಗರದ ಫಿಟ್‌ನೆಸ್ ಕ್ಲಬ್‌ಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವ ಬಗ್ಗೆ ಗಂಭೀರ ಮಾಹಿತಿ ಲಭ್ಯ ಬೆನ್ನಲ್ಲೇ, ಗೃಹಕಚೇರಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಶೇಖರ್ ಹೆಚ್. ತೆಕ್ಕಣ್ಣವರ್ ಅವರೊಂದಿಗೆ ತುರ್ತು ಸಭೆ ನಡೆಸಿ, ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ತಕ್ಷಣವೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಖಡಕ್ ಸೂಚನೆ ನೀಡಿದರು.
ಸಭೆಯಲ್ಲಿ ಕೈಗೊಳ್ಳಲಾದ ಪ್ರಮುಖ ನಿರ್ಧಾರಗಳು ಹಾಗೂ ಪೊಲೀಸ್ ಇಲಾಖೆಗೆ ನೀಡಿರುವ ನಿರ್ದೇಶನಗಳು ಈ ಕೆಳಗಿನಂತಿವೆ.
ಸಿಸಿಟಿವಿ ಅಳವಡಿಕೆ ಹಾಗೂ ತಪಾಸಣೆ: ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಫಿಟ್‌ನೆಸ್ ಕ್ಲಬ್‌ಗಳು, ಜಿಮ್‌ಗಳು, ವಾಣಿಜ್ಯ ಮಳಿಗೆಗಳು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ನಿಯಮಗಳ ಪಾಲನೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ತಕ್ಷಣವೇ ಸ್ಥಳ ಪರಿಶೀಲನೆ ನಡೆಸಲು ಸೂಚಿಸಲಾಗಿದೆ.
ಮಾಲೀಕರ ಸಭೆ ಮತ್ತು ಜಾಗೃತಿ: ಜಿಮ್ ಹಾಗೂ ಫಿಟ್‌ನೆಸ್ ಕ್ಲಬ್‌ಗಳ ಮಾಲೀಕರೊಂದಿಗೆ ತಕ್ಷಣವೇ ವಿಶೇಷ ಸಭೆ ನಡೆಸಿ, ಮಹಿಳಾ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸಬೇಕು ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡಬೇಕು.
ವ್ಯಾಪಕ ಜಾಗೃತಿ ಅಭಿಯಾನ: ಜಿಲ್ಲೆಯಾದ್ಯಂತ ಮಹಿಳಾ ಸುರಕ್ಷತೆ ಮತ್ತು ಅವರ ಹಕ್ಕುಗಳ ಕುರಿತು ವ್ಯಾಪಕ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
'ಅಕ್ಕಪಡೆ' ಸಹಾಯವಾಣಿ ಬಲವರ್ಧನೆ: ಮಹಿಳೆಯರ ರಕ್ಷಣೆಗಾಗಿ ಇರುವ "ಅಕ್ಕಪಡೆ" ಸಹಾಯವಾಣಿಯ ಕಾರ್ಯನಿರ್ವಹಣೆಯನ್ನು ಮತ್ತಷ್ಟು ಬಲಪಡಿಸಬೇಕು. ಇದರ ಪರಿಣಾಮಕಾರಿ ಕಾರ್ಯವೈಖರಿಯನ್ನು ನಿರಂತರವಾಗಿ ಪರಿಶೀಲಿಸಿ, ತಾಂತ್ರಿಕವಾಗಿ ಮತ್ತು ಕಾರ್ಯಾಚರಣೆಯ ದೃಷ್ಟಿಯಿಂದ ಅಗತ್ಯ ಸುಧಾರಣೆಗಳನ್ನು ತರಲು ಸೂಚನೆ ನೀಡಲಾಗಿದೆ.
ದಾಕ್ಷಿಣ್ಯವಿಲ್ಲದ ಕಾನೂನು ಕ್ರಮ: ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಇಂತಹ ಕೃತ್ಯಗಳಲ್ಲಿ ತೊಡಗಿರುವ ತಪ್ಪಿತಸ್ಥರ ವಿರುದ್ಧ ಯಾವುದೇ ದಾಕ್ಷಿಣ್ಯವಿಲ್ಲದೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್ಪಿ ಅವರಿಗೆ ಕಡಕ್ ನಿರ್ದೇಶನ ನೀಡಲಾಗಿದೆ.
ಮಹಿಳೆಯರ ಸುರಕ್ಷತೆಯ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಇಲ್ಲ ಎಂದು ಸಭೆಯಲ್ಲಿ ಸ್ಪಷ್ಟಪಡಿಸಲಾಗಿದ್ದು, ಜಿಲ್ಲಾ ಪೊಲೀಸ್ ಇಲಾಖೆ ತಕ್ಷಣದಿಂದಲೇ ಕಾರ್ಯಾಚರಣೆಗೆ ಇಳಿಯುವಂತೆ ಆದೇಶಿಸಲಾಗಿದೆ.



