ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಯುವಕರು ತಮ್ಮ ಕುಟುಂಬಕ್ಕೆ, ಸಮಾಜಕ್ಕೆ ಹಾಗೂ ತಾವು ಕಲಿತ ವಿದ್ಯಾಸಂಸ್ಥೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುವ ಮೂಲಕ ಸನ್ಮಾರ್ಗದಲ್ಲಿ ನಡೆದು, ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಚಂದ್ರಪ್ಪ ಹೇಳಿದರು.
ಶ್ರೀ ದೇವರಾಜ್ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಕನ್ನಡ ಭಾಷಾ ವಿಭಾಗದ ವತಿಯಿಂದ ಆಯೋಜಿಸಿದ್ದ “ವಚನಗಳಲ್ಲಿ ಮಾನವೀಯ ಮೌಲ್ಯಗಳು”ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ವಚನಕಾರರು ಪ್ರತಿಪಾದಿಸಿದ ಮಾನವೀಯ ಮೌಲ್ಯಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ,
ವಚನಕಾರರು ದೇವರನ್ನು ಕೇವಲ ದೇವಸ್ಥಾನ, ಆಚರಣೆ ಅಥವಾ ಕರ್ಮಕಾಂಡಗಳಲ್ಲಿ ಹುಡುಕಲಿಲ್ಲ. ಮನುಷ್ಯನ ಅಂತರಂಗದ ಶುದ್ಧತೆ, ಸತ್ಕರ್ಮ, ಸತ್ಯನಿಷ್ಠೆ ಹಾಗೂ ಸಮಾಜದ ಒಳಿತಿನಲ್ಲಿಯೇ ದೇವರನ್ನು ಕಂಡರು. ಆದ್ದರಿಂದ ವಚನಗಳ ಸಂದೇಶವನ್ನು ಕೇವಲ ಓದಿ ತಿಳಿದುಕೊಳ್ಳುವುದಕ್ಕಿಂತ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದರು.
ಕನ್ನಡ ಭಾಷಾ ವಿಭಾಗದ ಮುಖ್ಯಸ್ಥ ಡಾ. ಎಂ. ಚಿಕ್ಕಣ್ಣ ಮಾತನಾಡಿ ಇಂದಿನ ಸಮಾಜದಲ್ಲಿ ಮನುಷ್ಯನನ್ನು ಜಾತಿ, ಧರ್ಮ, ಆರ್ಥಿಕ ಸ್ಥಿತಿ, ಲಿಂಗ ಅಥವಾ ವೃತ್ತಿಯ ಆಧಾರದ ಮೇಲೆ ಅಳೆಯದೆ, ಮೊದಲು ಮನುಷ್ಯನಾಗಿ ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು, ಕೆಲಸದಲ್ಲಿ ಮೇಲು–ಕೀಳು ಎಂಬುದಿಲ್ಲ; ಕೆಲಸ ಮಾಡುವ ಮನಸ್ಸಿನಲ್ಲಿ ಪ್ರಾಮಾಣಿಕತೆ ಇರಬೇಕು,ರೈತನಾಗಲಿ, ಕಾರ್ಮಿಕನಾಗಲಿ, ಶಿಕ್ಷಕನಾಗಲಿ, ವೈದ್ಯನಾಗಲಿ, ವ್ಯಾಪಾರಿಯಾಗಲಿ,ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರ ಕಾಯಕವೂ ಅಗತ್ಯ”ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಎಸ್. ಗೌರಪ್ಪ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.




