ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ದೊಡ್ಡ ಪ್ರಮಾಣದ ಅಕ್ರಮ ನಡೆಯುತ್ತಿದೆ ಹಾಗೂ ಮತದಾರರ ಹೆಸರನ್ನು ಕೈಬಿಡಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೇಂದ್ರ ಚುನಾವಣಾ ಆಯೋಗ (ಇಸಿಐ) ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಗುರುವಾರ ನೋಟಿಸ್ ಜಾರಿ ಮಾಡಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಇತರ ವಿರೋಧ ಪಕ್ಷದ ನಾಯಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಕೈಗೆತ್ತಿಕೊಂಡಿತು.
ಈ ವೇಳೆ ಪೀಠವು ಚುನಾವಣಾ ಆಯೋಗ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರಿಂದ ಅಧಿಕೃತ ಪ್ರತಿಕ್ರಿಯೆ ಕೋರಿದೆ.
ಪ್ರತಿಪಕ್ಷ ನಾಯಕರ ನಡೆಗೆ ಸುಪ್ರೀಂ ಆಕ್ಷೇಪ
ಮತ್ತೊಂದೆಡೆ, ಎಸ್ಐಆರ್ ಅಕ್ರಮವನ್ನು ಖಂಡಿಸಿ ಸುಪ್ರೀಂ ಕೋರ್ಟ್ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಪಕ್ಷಗಳ ನಡವಳಿಕೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಪ್ರತ್ಯೇಕ ಅರ್ಜಿಯ ವಿಚಾರಣೆಯನ್ನೂ ಕೋರ್ಟ್ ನಡೆಸಿತು. ಈ ಸಂಬಂಧ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಇತರ ನಾಯಕರಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
ವಿಚಾರಣೆ ವೇಳೆ ಕಠಿಣ ಎಚ್ಚರಿಕೆ ನೀಡಿದ ಸಿಜೆಐ ನೇತೃತ್ವದ ಪೀಠವು, "ಯಾರೂ ನ್ಯಾಯಾಂಗವನ್ನು ಬಗ್ಗುಬಡಿಯಲು, ಸೋಲಿಸಲು ಅಥವಾ ಬೆದರಿಸಲು ಸಾಧ್ಯವಿಲ್ಲ. ಅರ್ಜಿಯ ವಿಚಾರಣೆಗೆ ನೋಟಿಸ್ ನೀಡಿದ್ದೇವೆ ಎಂದ ತಕ್ಷಣವೇ, ರಾಜಕೀಯ ನಾಯಕರ ಈ ಅನುಚಿತ ವರ್ತನೆಯನ್ನು ನ್ಯಾಯಾಲಯ ಕ್ಷಮಿಸಿದೆ ಎಂದು ಅರ್ಥವಲ್ಲ," ಎಂದು ಸ್ಪಷ್ಟಪಡಿಸಿತು.
ಸುಪ್ರೀಂ ಆವರಣದಲ್ಲಿ ಪ್ರತಿಭಟನೆಗೆ ಆಕ್ಷೇಪ
ವಿಚಾರಣೆ ಆರಂಭವಾಗುತ್ತಿದ್ದಂತೆ ಹಿರಿಯ ವಕೀಲ ಗೌರವ್ ಭಾಟಿಯಾ ಹಾಗೂ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸೋಮವಾರ ಸಂಭವಿಸಿದ ಘಟನೆಯನ್ನು ನ್ಯಾಯಾಲಯದ ಗಮನಕ್ಕೆ ತಂದರು.
ಸುಪ್ರೀಂ ಕೋರ್ಟ್ ಸಂಕೀರ್ಣಕ್ಕೆ ರಾಜಕೀಯ ಮೆರವಣಿಗೆ ನಡೆಸುವುದು, ನೂರಾರು ಕಾರ್ಯಕರ್ತರೊಂದಿಗೆ ಆಗಮಿಸಿ ಘೋಷಣೆಗಳನ್ನು ಕೂಗುವ ಮೂಲಕ ನ್ಯಾಯಾಂಗದ ಮೇಲೆ ಒತ್ತಡ ಹೇರಲು ಯತ್ನಿಸುವುದು ಸಂಪೂರ್ಣವಾಗಿ ಅಸ್ವೀಕಾರಾರ್ಹ ನಡವಳಿಕೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಸಿಸಿಟಿವಿ ದೃಶ್ಯಾವಳಿ ಸಂರಕ್ಷಿಸಲು ನಿರ್ದೇಶನ
ಸೋಮವಾರದ ಪ್ರತಿಭಟನೆಯ ವೇಳೆ ಸುಪ್ರೀಂ ಕೋರ್ಟ್ ಆವರಣ ಹಾಗೂ ಮುಖ್ಯ ಗೇಟ್ಗಳ ಬಳಿ ನಡೆದ ಎಲ್ಲಾ ವಿದ್ಯಮಾನಗಳ ಸಂಪೂರ್ಣ ಸಿಸಿಟಿವಿ ರೆಕಾರ್ಡಿಂಗ್ಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿಡುವಂತೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ಗೆ ನಿರ್ದೇಶನ ನೀಡಿದೆ.




