ಚಂದ್ರವಳ್ಳಿ ನ್ಯೂಸ್, ಕೊಪ್ಪಳ:
ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆಯಂತಹ ಇತಿಹಾಸ ಪ್ರಸಿದ್ಧ ಕಾರ್ಯಕ್ರಮ ಯಶಸ್ವಿಯಾಗಿದೆಯಾದರೂ, ತೆರೆಮರೆಯ ಕೆಲವು ರಾಜಕೀಯ ವಿದ್ಯಮಾನಗಳು ಹಾಗೂ ಗೊಂದಲಗಳು ಸಾರ್ವಜನಿಕರ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದ ಈ ಬೃಹತ್ ಕಾರ್ಯಕ್ರಮದಲ್ಲಿ ಸ್ವತಃ ಕರ್ನಾಟಕದ ಜಲಸಂಪನ್ಮೂಲ ಸಚಿವರಾದ ರಾಮಲಿಂಗಾರೆಡ್ಡಿ ಅವರ ಗೈರುಹಾಜರಿ ಹಲವು ಅನುಮಾನ ಹಾಗೂ ಅಚ್ಚರಿಗಳಿಗೆ ಕಾರಣವಾಗಿದೆ.
ಪಕ್ಕದ ರಾಜ್ಯದ ಸಚಿವರಿದ್ದರೂ 'ಸ್ಥಳೀಯ' ಸಚಿವರೇ ಇರಲಿಲ್ಲ!:
ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ನೀರಾವರಿ ಸಚಿವರು ಮತ್ತು ಉನ್ನತ ಅಧಿಕಾರಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಜಲಾಶಯದ ಸುರಕ್ಷತೆಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ, ಕರ್ನಾಟಕದ ಪರವಾಗಿ ಮುಂದೆ ನಿಂತು ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳಬೇಕಿದ್ದ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರೇ ಕಾಣಿಸಿಕೊಳ್ಳಲಿಲ್ಲ.
ಕಳೆದ ಒಂದು ವಾರದಿಂದೀಚೆಗೆ ಜಲಾಶಯಕ್ಕೆ ಖುದ್ದಾಗಿ ಭೇಟಿ ನೀಡಿ, ಕಾರ್ಯಕ್ರಮದ ಪೂರ್ವಸಿದ್ಧತೆಗಳನ್ನು ಹತ್ತಿರದಿಂದ ಪರಿಶೀಲಿಸಿದ್ದ ಸಚಿವರು, ಕಡೇ ಕ್ಷಣದಲ್ಲಿ ಇಂತಹ ಮಹತ್ವದ ಸಮಾಗಮಕ್ಕೆ ಗೈರಾಗಿರುವುದು ರಾಜಕೀಯ ವಲಯದಲ್ಲಿ ನಾನಾ ವಿಶ್ಲೇಷಣೆಗಳಿಗೆ ದಾರಿ ಮಾಡಿಕೊಟ್ಟಿದೆ.
ಖಾತೆ ಅಸಮಾಧಾನದ ಹಿನ್ನೆಲೆ:
ರಾಮಲಿಂಗಾರೆಡ್ಡಿ ಅವರ ಈ ನಡೆಗೆ ಇಲಾಖೆಯ ಮೇಲಿನ ಅಸಮಾಧಾನವೇ ಕಾರಣ ಇರಬಹುದು ಎನ್ನಲಾಗುತ್ತಿದೆ. ಇತ್ತೀಚಿನ ಸಚಿವ ಸಂಪುಟ ಪುನಾರಚನೆ ವೇಳೆ ಅವರಿಗೆ ಜಲಸಂಪನ್ಮೂಲ ಖಾತೆ ನೀಡಲಾಗಿತ್ತು. ಆದರೆ, ಈ ಖಾತೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಅವರು, ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಪಟ್ಟು ಹಿಡಿದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕೊನೆಗೆ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ, ಅವರನ್ನು ಸಮಾಧಾನಪಡಿಸಿ ರಾಜೀನಾಮೆ ವಾಪಸ್ ಪಡೆಯುವಂತೆ ಮಾಡಿ ಜಲಸಂಪನ್ಮೂಲ ಇಲಾಖೆಯ ಜವಾಬ್ದಾರಿ ವಹಿಸಿದ್ದರು. ಆದರೆ, ಇಲಾಖೆಯ ಅತ್ಯಂತ ಪ್ರಮುಖ ಕಾರ್ಯಕ್ರಮಕ್ಕೇ ಸಚಿವರು ಗೈರಾಗಿರುವುದು ಅಸಮಾಧಾನದ ಹೊಗೆ ಇನ್ನೂ ಆರಿಲ್ಲ ಎಂಬುದಕ್ಕೆ ಸಾಕ್ಷಿಯಂತಿದೆ.
ಕಾಡಾ ಅಧ್ಯಕ್ಷರ ಪ್ರವೇಶಕ್ಕೆ ಪೊಲೀಸರ ತಡೆ!:
ಇನ್ನೊಂದೆಡೆ, ಕಾರ್ಯಕ್ರಮದ ಆರಂಭಕ್ಕೂ ಮುನ್ನ ಮುಖ್ಯ ವೇದಿಕೆಯ ಬಳಿ ಹೈಡ್ರಾಮಾವೊಂದು ನಡೆಯಿತು. ತುಂಗಭದ್ರಾ ಯೋಜನೆಯ ಕಾಡಾ ಅಧ್ಯಕ್ಷರಾದ ಹಸನಸಾಬ ದೋಟಿಹಾಳ ಅವರು ವೇದಿಕೆಯತ್ತ ಬರುತ್ತಿದ್ದಾಗ ಭದ್ರತಾ ಪೊಲೀಸರು ಅವರನ್ನು ತಡೆದರು.
"ಸ್ವತಃ ಕಾಡಾ ಅಧ್ಯಕ್ಷರನ್ನೇ ವೇದಿಕೆಗೆ ಬಿಡುವುದಿಲ್ಲ ಎಂದರೆ ಹೇಗೆ?" ಎಂದು ಆಕ್ರೋಶಗೊಂಡ ದೋಟಿಹಾಳ ಅವರು ಸ್ಥಳದಲ್ಲಿದ್ದ ಸೈಬರ್ ವಿಭಾಗದ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಅವರೊಂದಿಗೆ ತೀವ್ರ ತಗಾದೆ ತೆಗೆದರು. ವೇದಿಕೆ ಮೇಲಿರುವ ಗಣ್ಯರ ಅಧಿಕೃತ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದಾಗ, ಇಬ್ಬರ ನಡುವೆ ಕೆಲಕಾಲ ವಾಗ್ವಾದ ನಡೆದು ಗೊಂದಲದ ವಾತಾವರಣ ನಿರ್ಮಾಣವಾಯಿತು. ಕೊನೆಗೆ ಸ್ಥಳಕ್ಕೆ ಧಾವಿಸಿದ ಎಡಿಸಿ ಸಿದ್ದರಾಮೇಶ್ವರ ಅವರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ, ಸಮಸ್ಯೆ ಬಗೆಹರಿಸಿದರು.
ಒಟ್ಟಾರೆ ಚಿತ್ರಣ: ಒಂದು ಕಡೆ ಮೂರು ರಾಜ್ಯಗಳ ಒಗ್ಗಟ್ಟಿನ ಪ್ರದರ್ಶನದ ನಡುವೆ 33 ಕ್ರೆಸ್ಟ್ ಗೇಟ್‌ಗಳು ಯಶಸ್ವಿಯಾಗಿ ಲೋಕಾರ್ಪಣೆಗೊಂಡರೆ, ಇನ್ನೊಂದೆಡೆ ಸಚಿವರ ಗೈರುಹಾಜರಿ ಮತ್ತು ಪ್ರೋಟೋಕಾಲ್ ಗೊಂದಲಗಳು ಕಾರ್ಯಕ್ರಮದ ಆವರಣದಲ್ಲಿ ಭಾರೀ ಚರ್ಚೆಗೆ ಕಾರಣವಾದವು.



