ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಬುದ್ದ ಸರ್ಕಲ್‌ನಿಂದ ಮೇಲ್ಬಾಗದಲ್ಲಿರುವ ಟೀಚರ್‍ಸ್ ಕಾಲೋನಿ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ.
ಪೊದೆ, ಕುರುಚಲು ಗಿಡಗಳೆ ಹೆಚ್ಚಾಗಿರುವ ಟೀಚರ್‍ಸ್ ಕಾಲೋನಿಯಲ್ಲಿ ಎಂಟು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ಬೀದಿ ದೀಪಗಳು ಅಷ್ಟಕಷ್ಟೆ. ಕೆಲವು ಕಡೆ ರಾತ್ರಿ ವೇಳೆ ಕಾರ್ಗತ್ತಲು ಆವರಿಸುತ್ತದೆ. ಕೆಲವೊಮ್ಮೆ ಹಾವುಗಳು ರಸ್ತೆಯಲ್ಲೇ ಮಲಗಿರುತ್ತವೆ. ನಗರಸಭೆ ಕಸದ ವಾಹನ ಎರಡು ಮೂರು ದಿನಕ್ಕೊಮ್ಮೆ ಬರುತ್ತದೆ. ಸಮನಾಗಿಲ್ಲದ ರಸ್ತೆಗಳು ತಗ್ಗು-ದಿಣ್ಣೆಯಿಂದ ಕೂಡಿದೆ. ವಯಸ್ಸಾದವರು ಇಲ್ಲಿ ನಡೆದಾಡುವುದೇ ಕಷ್ಟ. ಮಳೆಗಾಲದಲ್ಲಿ ರಸ್ತೆಗಳು ಕೆಸರುಮಯವಾಗಿರುತ್ತವೆ.
ಖಾಲಿ ನಿವೇಶನಗಳಲ್ಲಿ ಕಸದ ರಾಶಿಯೆ ಕಣ್ಣಿಗೆ ರಾಚುತ್ತದೆ. ಬೀದಿ ನಾಯಿ, ಹಂದಿಗಳು ಎಗ್ಗಿಲ್ಲದೆ ಓಡಾಡುತ್ತಿರುತ್ತವೆ. ನಿವೃತ್ತ ಶಿಕ್ಷಕರು, ಉಪಾಧ್ಯಾಯರು, ಉಪನ್ಯಾಸಕರು ಅಧ್ಯಾಪಕರುಗಳೆ ಇಲ್ಲಿ ಹೆಚ್ಚು ವಾಸವಾಗಿರುವುದರಿಂದಲೆ ಟೀಚರ್‍ಸ್ ಕಾಲೋನಿ ಎಂಬ ಹೆಸರಿಡಲಾಗಿದೆ.
ಇಲ್ಲಿರುವುದು ಐಷಾರಾಮಿ ಮನೆಗಳೆ. ಆದರೆ ಸಮಸ್ಯೆಗಳ ಆಗರವಾಗಿದೆ. ಹಿರಿಯೂರಿನ ವಾಣಿವಿಲಾಸಸಾಗರ, ಶಾಂತಿಸಾಗರದ ನೀರು ಸರಿಯಾಗಿ ಸರಬರಾಜಿಲ್ಲದ ಕಾರಣ ಇಲ್ಲಿನ ನಿವಾಸಿಗಳು ಬೋರ್‌ವೆಲ್ ನೀರನ್ನೆ ಆಶ್ರಯಿಸಿದ್ದಾರೆ.
ನಗರಸಭೆಯಾಗಲಿ, ಜಿಲ್ಲಾಡಳಿತವಾಗಲಿ ಒಮ್ಮೆ ಇತ್ತ ಕಣ್ಣಾಯಿಸುವುದು ಸೂಕ್ತವೆಂದು ಟೀಚರ್‍ಸ್ ಕಾಲೋನಿ ನಿವಾಸಿ ನಿವೃತ್ತ ಮುಖ್ಯ ಶಿಕ್ಷಕ ಎಲ್.ಸೀತಾರಾಮಯ್ಯ ಮನವಿ ಮಾಡಿದ್ದಾರೆ.



