ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಶಿಕ್ಷಕ ವೃತ್ತಿ ನಿಂತ ನೀರಾಗಬಾರದು. ಸದಾ ಹರಿಯುತ್ತಿದ್ದಾಗ ಮಾತ್ರ ಮಕ್ಕಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಬಹುದು ಎಂದು ಮುಖ್ಯೋಪಾಧ್ಯಾಯಿನಿ ಕರ್ನಾಟಕ ವೈಜ್ಞಾನಿಕ ಪರಿಷತ್ ಜಿಲ್ಲಾಧ್ಯಕ್ಷ ಡಾ.ಲೋಲಾಕ್ಷಮ್ಮ ಬಿ.ಟಿ ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.
ದಾವಣಗೆರೆ ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಹೆದ್ದಾರಿ-೧೩ ರಲ್ಲಿರುವ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಬಾಪೂಜಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಹತ್ತು
ಬೆಳದಿಂಗಳ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರುಗಳಿಗೆ ತರಗತಿ ಕೋಣೆಯಲ್ಲಿ ನಿಜವಾದ ಸವಾಲು ಎದುರಾಗುತ್ತದೆ. ಏಕೆಂದರೆ ಇಂದಿನ ಮಕ್ಕಳು ತುಂಬಾ ಚುರುಕಾಗಿರುವುದರಿಂದ ಅವರುಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕಾದರೆ ಮೊದಲು ಶಿಕ್ಷಕರುಗಳು ತಯಾರಿ ನಡೆಸಿಕೊಂಡಿರಬೇಕು. ನೀವುಗಳು ಆದರ್ಶ, ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಮಕ್ಕಳು ನಿಮ್ಮನ್ನು ಅನುಸರಿಸುತ್ತಾರೆ. ನಮ್ಮ ಕುಟುಂಬದಲ್ಲಿ ನಾಲ್ಕು ತಲೆಮಾರಿನಿಂದಲೂ ಶಿಕ್ಷಕ ವೃತ್ತಿಯನ್ನು ಮುಂದುವರೆಸಿಕೊಂಡು ಬರುತ್ತಿದ್ದೇವೆ. ಮಾಡುವ ಕೆಲಸದಲ್ಲಿ ನಿಷ್ಠೆ, ಪ್ರಾಮಾಣಿಕತೆ, ಬದ್ದತೆ, ಸಮಯ ಪ್ರಜ್ಞೆಯಿದ್ದಾಗ ಮಾತ್ರ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಶಸ್ತಿಯನ್ನು ಪಡೆಯಬಹುದು. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವುದು ಶಿಕ್ಷಕರುಗಳ ಮೇಲಿದೆ. ಬಿ.ಇ.ಡಿ. ಮುಗಿದ ತಕ್ಷಣ ನೀವುಗಳು ಶಿಕ್ಷಕ ವೃತ್ತಿಗೆ ಕಾಲಿಡುತ್ತೀರ. ಆಗ ನಿಜವಾಗಿಯೂ ಶಿಕ್ಷಕರ ಕೆಲಸ ಎಷ್ಟು ಕಷ್ಟ ಎಂಬುದು ನಿಮ್ಮ ಅರಿವಿಗೆ ಬರುತ್ತದೆ. ಅದಕ್ಕಾಗಿ ಪಾಠ ಮಾಡಲು ತರಗತಿಗೆ ಹೋಗುವ ಮುನ್ನ ನೀವುಗಳು ಚೆನ್ನಾಗಿ ಓದಿಕೊಂಡು ಹೋದಾಗ ಮಾತ್ರ ಮಕ್ಕಳ ಮನಸ್ಸಿಗೆ ನಾಟುವ ರೀತಿಯಲ್ಲಿ ಪಾಠ ಮಾಡಬಹುದು. ಜೀವನಕ್ಕೆ ವೃತ್ತಿ ಬದುಕಿಗೆ ಹಿರಿಯರ ಮಾರ್ಗದರ್ಶನ ಆದರ್ಶಗಳನ್ನು ಅಳವಡಿಸಿಕೊಳ್ಳಿ ಎಂದು ಕರೆ ತಿಳಿಸಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತ, ಕಡ್ಲೆಗುದ್ದು ಶಾಲೆಯ ಮುಖ್ಯ ಶಿಕ್ಷಕ ಡಾ.ಮಹೇಶ್ ಕೆ.ಎನ್. ಶಾಲೆಗಳಲ್ಲಿ ದಾಖಲಾತಿಗಳ ನಿರ್ವಹಣೆ ಎಂಬ ವಿಷಯ ಕುರಿತು ಮಾತನಾಡುತ್ತ ಶಿಕ್ಷಕ ವೃತ್ತಿ ಎಲ್ಲರಿಗೂ ಸಿಗುವುದಿಲ್ಲ. ಆತ್ಮತೃಪ್ತಿ, ನೆಮ್ಮದಿಯಿಂದ ಇರಬೇಕಾದರೆ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಿ. ದೇಶ ಸುಭದ್ರವಾಗಿರಬೇಕಾದರೆ ಸಂವಿಧಾನ ಎಷ್ಟು ಮುಖ್ಯವೋ, ಒಂದು ಶಾಲೆ ಅಚ್ಚುಕಟ್ಟಾಗಿ ನಡೆಯಬೇಕಾದರೆ ದಾಖಲಾತಿಗಳ ನಿರ್ವಹಣೆ ಅಷ್ಟೆ ಮುಖ್ಯ ಎಂದು ಹೇಳಿದರು.
ಮಕ್ಕಳಿಗೆ ಪಾಠ ಮಾಡುವುದರ ಜೊತೆಗೆ ಶಿಕ್ಷಕರುಗಳು ಬೇರೆ ಬೇರೆ ಕಾರ್ಯಭಾರಗಳನ್ನು ನಿಭಾಯಿಸಬೇಕಾಗುತ್ತದೆ. ೨೦ ರಿಂದ ೨೫ ನಿಮಿಷಗಳ ಕಾಲ ಮಕ್ಕಳ ಫೋಟೋ ತೆಗೆಯುವುದರಿಂದ ಹಿಡಿದು ಮಧ್ಯಾಹ್ನದ ಬಿಸಿಯೂಟ, ಪಠ್ಯ ಪುಸ್ತಕಗಳ ವಿತರಣೆ, ಹಾಜರಾತಿ ಹೀಗೆ ನಾನಾ ಒತ್ತಡಗಳ ನಡುವೆ ಶಿಕ್ಷಕ ಕೆಲಸ ಮಾಡಬೇಕಾಗುತ್ತದೆ. ಶಾಲೆಯ ಯಶಸ್ಸು ಕೇವಲ ಫಲಿತಾಂಶದ ಮೇಲೆ ನಿಂತಿಲ್ಲ. ಮಕ್ಕಳ ದಾಖಲಾತಿ ಮುಖ್ಯ. ಉತ್ತಮ ಆಡಳಿತ, ಪಾರದರ್ಶಕತೆ, ದಾಖಲಾತಿ, ಸಮಯ ಪ್ರಜ್ಞೆ ಎಲ್ಲಿರುತ್ತದೋ ಅಂತಹ ಶಾಲೆ ಗಟ್ಟಿಯಾಗಿ ಉಳಿಯುತ್ತದೆಂದರು.
ಪಾಠದ ಜೊತೆ ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ದಾಖಲೆಯೆ ಬೃಹತ್ ಭಂಡಾರವಿದ್ದಂತೆ. ಹಾಜರಾತಿಗೆ ಮಹತ್ವವಿದೆ. ವಿದ್ಯಾರ್ಥಿಗಳ ಹಾಜರಾತಿ ವಹಿಯನ್ನು ಸರಿಯಾಗಿ ನಿರ್ವಹಿಸದಿದ್ದರೆ ಶಿಕ್ಷಕರು ತೊಂದರೆ ಅನುಭವಿಸಬೇಕಾಗುತ್ತದೆ. ಕ್ರಿಯಾ ಯೋಜನೆ, ಲೆಸನ್ ಪ್ಲಾನ್, ಕಾರ್ಯಭಾರ ಒತ್ತಡದಿಂದ ಮೌಲ್ಯಮಾಪನ ಸರಿಯಾಗಿ ಮಾಡಲು ಆಗುತ್ತಿಲ್ಲ. ಪ್ರತಿದಿನ ಶಾಲೆ ಆರಂಭದಿಂದ ಹಿಡಿದು ಸಂಜೆ ಮುಗಿಯುವ ಅವಧಿವರೆಗೆ ನೂರಾರು ದಾಖಲೆಗಳನ್ನು ನಿರ್ವಹಿಸಬೇಕಾಗುತ್ತದೆ. ಮೂರು ಗಂಟೆ ಓದಿದರೆ ಶಾಲೆಯಲ್ಲಿ ಮಕ್ಕಳಿಗೆ ೪೦ ನಿಮಿಷ ಪಾಠ ಮಾಡಬಹುದು. ವಿನೂತನ ಬೋಧನಾ ತಂತ್ರಗಾರಿಕೆಯಿದ್ದರೆ ಉತ್ತಮ ಶಿಕ್ಷಕನಾಗಬಹುದು ಎಂದರು.
ನಿವೃತ್ತ ಮುಖ್ಯೋಪಾಧ್ಯಾಯ ಟಿ.ಈಶ್ವರಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ ಎರಡು ವರ್ಷಗಳ ಕಾಲ ನೀವುಗಳು ಶ್ರದ್ದೆಯಿಂದ ಅಭ್ಯಾಸ ಮಾಡಿದರೆ ಜೀವನದಲ್ಲಿ ಮುಂದೆ ನೆಮ್ಮದಿಯಿಂದ ಇರಬಹುದು. ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವವರು ಕ್ರಿಯಾಶೀಲರಾಗಿರಬೇಕು. ಸದಾ ಪುಸ್ತಕಗಳನ್ನು ಓದುವುದರಿಂದ ಜ್ಞಾನವನ್ನು ಹೆಚ್ಚಿಸುತ್ತವೆ. ಬಿಇಡಿ. ಮುಗಿದ ಕೂಡಲೆ ಶಿಕ್ಷಕರಾಗುವುದು ಸುಲಭವಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ. ಅದಕ್ಕಾಗಿ ಕಠಿಣ ಪರಿಶ್ರಮ ಮುಖ್ಯ ಎಂದು ತಿಳಿಸಿದರು.
ಶಾಲೆಗಳಲ್ಲಿ ದಾಖಲೆಗಳ ನಿರ್ವಹಣ ಶಿಕ್ಷಕರುಗಳಿಗೆ ಒತ್ತಡವಾಗುತ್ತಿದೆ. ಶಿಕ್ಷಕರುಗಳು ಮಕ್ಕಳಿಗೆ ಮಾದರಿಯಾಗಿದ್ದಾಗ ಮಕ್ಕಳನ್ನು ಆಕರ್ಷಿಸಿಕೊಳ್ಳಬಹುದು. ಶಾಲೆಯಲ್ಲಿ ಶಿಸ್ತುಬದ್ದರಾಗಿರಿ. ಮಕ್ಕಳ ಪ್ರಶ್ನೆಗೆ ಸಮಾಧಾನವಾಗಿ ಉತ್ತರಿಸಬೇಕಾದರೆ ನಿಮ್ಮಲ್ಲಿ ಮೊದಲು ಜ್ಞಾನವಿರಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ಬುದ್ದಿ ಮಾತು ಹೇಳಿದರು.
ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್ ಅಧ್ಯಕ್ಷತೆ ವಹಿಸಿದ್ದರು. ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ.ಎಂ.ಆರ್.ಜಯಲಕ್ಷ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪರಿಸರ ಮತ್ತು ವನ್ಯಜೀವಿ ಛಾಯಾಗ್ರಾಹಕ ಎಂ.ಕಾರ್ತಿಕ್, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಜಿ.ಹನುಮಂತರೆಡ್ಡಿ, ಕೆ.ಎಂ.ಎಸ್. ಪದವಿ ಕಾಲೇಜು ಪ್ರಾಚಾರ್ಯರಾದ ಮಂಜುಳ ಇವರುಗಳು ವೇದಿಕೆಯಲ್ಲಿದ್ದರು.



