ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. "ಕರ್ನಾಟಕ ಕಾಂಗ್ರೆಸ್ಸಿನ ಕುರ್ಚಿ ಕಚ್ಚಾಟದ ಪ್ರಹಸನಕ್ಕೆ ಸದ್ಯ ತಾತ್ಕಾಲಿಕ ಅಂತ್ಯ ದೊರೆತಿದೆ. ಆದರೆ, ಈ ಬದಲಾವಣೆಯಿಂದ ಕನ್ನಡಿಗರಿಗೆ ನಯಾಪೈಸೆ ಪ್ರಯೋಜನ ಇಲ್ಲ" ಎಂದು ರಾಜ್ಯ ಬಿಜೆಪಿ ಲೇವಡಿ ಮಾಡಿದೆ.
ಸಿದ್ದರಾಮಯ್ಯ ಅವರ ರಾಜೀನಾಮೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಸಾಮಾಜಿಕ ಜಾಲತಾಣ 'ಎಕ್ಸ್' (ಟ್ವಿಟರ್) ನಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಬಿಜೆಪಿ, ಕಳೆದ ಮೂರು ವರ್ಷಗಳ ಕಾಂಗ್ರೆಸ್ ಆಡಳಿತವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
3 ವರ್ಷದ ಸಾಧನೆ ಎಂದರೆ ಲೂಟಿ ಮತ್ತು ಸಾಲದ ಶೂಲ!:
ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಪಟ್ಟಿ ಮಾಡಿರುವ ಬಿಜೆಪಿ, "ಕಳೆದ ಮೂರು ವರ್ಷಗಳ ಈ ಸರ್ಕಾರದ ಸಾಧನೆ ಎಂದರೆ ಅದು ದಲಿತರ ಹಣ ದುರ್ಬಳಕೆ, ವಾಲ್ಮೀಕಿ ನಿಗಮದ ನೂರಾರು ಕೋಟಿ ಹಣದ ಲೂಟಿ, ಯುವಕರಿಗೆ ಉದ್ಯೋಗ ನೀಡದೆ ಟೋಪಿ ಹಾಕಿದ್ದು, ರೈತರಿಗೆ ನೇಣು ಕುಣಿಕೆ ಬಿಗಿದಿದ್ದು, ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ ಎಳೆದಿದ್ದು ಮತ್ತು ಇಡೀ ಕರ್ನಾಟಕಕ್ಕೆ ಸಾಲದ ಶೂಲ ಹೊದಿಸಿದ್ದು ಮಾತ್ರ" ಎಂದು ಆಕ್ರೋಶ ವ್ಯಕ್ತಪಡಿಸಿದೆ.
"ಕಲೆಕ್ಷನ್-ಕರಪ್ಷನ್-ಕಮಿಷನ್ ಸರ್ಕಾರ":
"ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಸ್ತಬ್ಧಗೊಳಿಸಿ, ಕೇವಲ ಕಲೆಕ್ಷನ್‌ಕರಪ್ಷನ್‌ಕಮಿಷನ್‌ನಲ್ಲಿಯೇ ಮೂರು ವರ್ಷಗಳನ್ನು ದೂಡಿರುವ ಕಾಂಗ್ರೆಸ್ ನಾಯಕರು, ಈಗ ರಾಜೀನಾಮೆ ಎಂಬ ಒಂದು ಅಲ್ಪ ವಿರಾಮ ಇಟ್ಟಿದ್ದಾರಷ್ಟೇ" ಎಂದು ಬಿಜೆಪಿ ಟೀಕಿಸಿದೆ.
"ನೂತನವಾಗಿ ಯಾರೇ ಮುಖ್ಯಮಂತ್ರಿಯಾಗಿ ಬಂದರೂ ಕನ್ನಡಿಗರಿಗಾಗಲಿ, ಕರ್ನಾಟಕಕ್ಕಾಗಲಿ ಯಾವುದೇ ಪ್ರಯೋಜನವಿಲ್ಲ. ಬಡವರು, ಶ್ರಮಿಕರು, ರೈತರು, ಯುವಕರು, ಮಹಿಳೆಯರು ಹಾಗೂ ದೀನ-ದಲಿತರನ್ನು ಹಿಂಸಿಸಿ, ಶೋಷಿಸಿ ಸರ್ಕಾರ ನಡೆಸುವ ಇವರ ಮೂಲ ಪ್ರವೃತ್ತಿ ಎಂದಿಗೂ ಬದಲಾಗುವುದಿಲ್ಲ."
ರಾಜ್ಯ ಬಿಜೆಪಿ
ಕರ್ನಾಟಕವೇ ಹೈಕಮಾಂಡ್‌ನ ಎಟಿಎಂ!:
"ಕರ್ನಾಟಕವನ್ನು ಸಂಪೂರ್ಣವಾಗಿ ದಿವಾಳಿ ಮಾಡುವುದು ಹಾಗೂ ದೆಹಲಿಯ ಕಾಂಗ್ರೆಸ್‌ಹೈಕಮಾಂಡಿಗೆ ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳುವುದು ಎರಡೇ ಇವರ ಮುಖ್ಯ ಅಜೆಂಡಾ ಆಗಿದೆ. ಹಾಗಾಗಿ, ಈ ಜನವಿರೋಧಿ ಸರ್ಕಾರ ಆದಷ್ಟು ಬೇಗ ತೊಲಗಿದರೆ ಮಾತ್ರ ಕನ್ನಡಿಗರಿಗೆ ನೆಮ್ಮದಿಯ ದಿನಗಳು ಬರಲು ಸಾಧ್ಯ" ಎಂದು ಬಿಜೆಪಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.



