ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150(A)ರ ಶ್ರೀನಿವಾಸ ಡಾಬಾ ಮುಂಭಾಗದ ಬ್ರಿಡ್ಜ್ ರಸ್ತೆಯಲ್ಲಿ ಭರತ್ ಬೆಂಜ್ ಲಾರಿ ಮತ್ತು ಇಂಡಿಗೋ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಾಜಿ ನಗರಸಭಾ ಸದಸ್ಯ ಸೇರಿ ಐವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಶುಕ್ರವಾರ ರಾತ್ರಿ ಸುಮಾರು 9:45 ರ ಅವಧಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಅಪಘಾತದ ವಿವರ: ರಾಷ್ಟ್ರೀಯ ಹೆದ್ದಾರಿ 150(A)ರಲ್ಲಿ ಹೋಗುತ್ತಿದ್ದ ಇಂಡಿಗೋ ಸಿಎಸ್ ಕಾರು ಲಾರಿ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಐದೂ ಜನ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಲಾರಿಯನ್ನು ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯ ಜಿ. ನಾಗಲಾಪುರ ಗ್ರಾಮದ ನಿವಾಸಿ ಎರ್ರಿಸ್ವಾಮಿ (37) ಎಂಬುವವರು ಚಲಾಯಿಸುತ್ತಿದ್ದರು ಎಂದು ಗುರುತಿಸಲಾಗಿದೆ.
ಮೃತರ ವಿವರ:
ಮೃತಪಟ್ಟವರೆಲ್ಲರೂ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನವರಾಗಿದ್ದಾರೆ.
ಚಳ್ಳಕೆರೆ ಟೌನ್ ಕಾರು ಚಾಲಕ ರಘು (40), ಚಳ್ಳಕೆರೆ ಟೌನ್ ವಿಠಲ್ ನಗರ ರುದ್ರೇಶ (36) ಮಾಜಿ ನಗಸಭಾ ಸದಸ್ಯ ಪ್ರಮೋದ (35), ವೀರದಿಮ್ಮನಹಳ್ಳಿ ಗ್ರಾಮದ ಸೋಮಶೇಖರ (35), ಮಲ್ಲಿಕಾರ್ಜುನ ಮೃತಪಟ್ಟವರಾಗಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಕುರಿತು ತನಿಖೆ ಮುಂದುವರಿದಿದೆ.



