ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಿದ್ದು, ಸಾರ್ವಜನಿಕರಿಂದ ಅಗತ್ಯ ದಾಖಲೆಗಳನ್ನು ಪಡೆದು ಅರ್ಹ ಮತದಾರರನ್ನು ಪಟ್ಟಿಯಲ್ಲಿ ಉಳಿಸಿಕೊಳ್ಳುವ ಗುರಿ ಹೊಂದಲಾಗಿದೆ ಎಂದು ನಗರಸಭೆ ಪೌರಾಯುಕ್ತರಾದ ಎ. ವಾಸೀಂ ತಿಳಿಸಿದರು.
ನಗರದ ವಿವಿಧ ಬಡಾವಣೆಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು ನಡೆಸುತ್ತಿರುವ ಎಸ್.ಐ.ಆರ್ ಪ್ರಕ್ರಿಯೆಯನ್ನು ತಾಲ್ಲೂಕು ಆಡಳಿತ ಹಾಗೂ ನಗರಸಭೆ ವತಿಯಿಂದ ಪರಿಶೀಲಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಆಲೂರು ಹನುಮಂತರಾಯಪ್ಪ ಅವರಿಗೆ 'ಎನ್ಯುಮರೇಶನ್ ಫಾರ್ಮ್' ವಿತರಿಸಿ ಪೌರಾಯುಕ್ತ ಎ.ವಾಸೀಂ ಅವರು ಮಾತನಾಡಿದರು.
ಸಾರ್ವಜನಿಕರ ಗಮನಕ್ಕೆ ಪ್ರಮುಖ ಅಂಶಗಳು:
ಮನೆ-ಮನೆ ಸಮೀಕ್ಷೆ: ಬಿ.ಎಲ್.ಓಗಳು ಪ್ರತಿ ಮನೆಗೆ ಭೇಟಿ ನೀಡಿ ಎನ್ಯುಮರೇಶನ್ ಫಾರ್ಮ್‌ಗಳನ್ನು ನೀಡುತ್ತಿದ್ದಾರೆ.
ದಾಖಲೆ ಸಲ್ಲಿಕೆ: ನಾಗರಿಕರು ಫಾರ್ಮ್ ಪಡೆದು, ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಸಂಪೂರ್ಣ ಮಾಹಿತಿ ಭರ್ತಿ ಮಾಡಿ ಬಿ.ಎಲ್.ಓಗಳಿಗೆ ಮರಳಿ ನೀಡಬೇಕು. ಫಾರ್ಮ್ ವಾಪಸ್ ನೀಡಿದರಷ್ಟೇ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಯಲು ಸಾಧ್ಯ.
ಹಳೇ ದಾಖಲೆಗಳ ಪರಿಶೀಲನೆ: 2002ರ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಹಾಗೂ ಲಿಂಕ್ ಇಲ್ಲದವರ ಹೆಸರುಗಳು ಈ ಫಾರ್ಮ್‌ನಲ್ಲಿ ಜನರೇಟ್ ಆಗಿರುತ್ತವೆ. ಅಂತಹವರನ್ನು ವಿಚಾರಣೆಗೆ ಕರೆದು, ಸೂಕ್ತ ದಾಖಲೆಗಳನ್ನು ಪಡೆದು ಹೆಸರು ಸೇರ್ಪಡೆಗೆ ಕ್ರಮ ಕೈಗೊಳ್ಳಲಾಗುವುದು.
ಮತದಾರರ ಸಹಾಯ ಕೇಂದ್ರ:
ಸಾರ್ವಜನಿಕರ ಅನುಕೂಲಕ್ಕಾಗಿ ನಗರಸಭೆ ಕಾರ್ಯಾಲಯ ಹಾಗೂ ಗ್ರಾಮೀಣ ಭಾಗದ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ 'ಮತದಾರರ ಸೌಲಭ್ಯ ಕೇಂದ್ರ'ಗಳನ್ನು ತೆರೆಯಲಾಗಿದೆ. ಮತದಾರರಿಗೆ ಯಾವುದೇ ಗೊಂದಲಗಳಿದ್ದಲ್ಲಿ ಇಲ್ಲಿನ ಸಿಬ್ಬಂದಿ ನೆರವು ಪಡೆಯಬಹುದು.
ಈ ಸಂದರ್ಭದಲ್ಲಿ ನಗರಸಭೆಯ ಅಶ್ರಫ್ ವುಲ್ಲಾ, ಹಿರಿಯ ಪತ್ರಕರ್ತ ಆಲೂರು ಹನುಮಂತರಾಯಪ್ಪ ಹಾಗೂ ಬಡಾವಣೆಯ ಪ್ರಮುಖ ನಾಗರಿಕರು ಉಪಸ್ಥಿತರಿದ್ದರು.



