Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬದುಕಿನ ‘ಅಮೃತ’ ಧಾರೆ: ಬಡವರ ಕಲ್ಯಾಣಕ್ಕಾಗಿ ಕಲ್ಯಾಣಸೌಧ ಕಟ್ಟಿದ ಸರಳ ಜೀವ ಸಿದ್ದೇಶ್ ಗೌಡ!

Advertisement
Advertisement

ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ರಾಜಕೀಯ ನೇತಾರರನ್ನು ಕರೆಸಿ, ಹೂಮಾಲೆ ಹಾಕಿಸಿಕೊಂಡು, ಜೈಕಾರ ಹಾಕಿಸಿಕೊಳ್ಳುವ ಇಂದಿನ ಪ್ರಚಾರಪ್ರಿಯ ಜಗತ್ತಿನಲ್ಲಿ ಹಿರಿಯೂರು ತಾಲೂಕಿನ ಸಲವಮ್ಮನಹಳ್ಳಿಯ ನಿವೃತ್ತ ನೌಕರರಾದ ಸಿದ್ದೇಶ್ ಗೌಡರು ಸಂಪೂರ್ಣ ಭಿನ್ನವಾಗಿ ನಿಲ್ಲುತ್ತಾರೆ.

ತಮ್ಮ ಬದುಕಿನ 75ನೇ ವರ್ಷದ 'ಅಮೃತ ಮಹೋತ್ಸವ' ಹಾಗೂ ವೈವಾಹಿಕ ಜೀವನದ 'ಸುವರ್ಣ ಮಹೋತ್ಸವ'ದ ನೆನಪನ್ನು ಇಡೀ ಸಮಾಜವೇ ಕೊಂಡಾಡುವಂತೆ ಕೃತಕೃತ್ಯಗೊಳಿಸಿದ್ದಾರೆ.

ತಮ್ಮ ಹೆತ್ತವರಾದ ಶ್ರೀ ನಾಡಿಗ ಸಣ್ಣ ಸಿದ್ದೇಗೌಡರು ಮತ್ತು ಶ್ರೀಮತಿ ಗೌರಮ್ಮನವರ ಜ್ಞಾಪಕಾರ್ಥವಾಗಿ, ಹಿರಿಯೂರು ತಾಲೂಕಿನ ಸುಪ್ರಸಿದ್ಧ ಕ್ಷೇತ್ರವಾದ ವದ್ದೀಕೆರೆ ಶ್ರೀ ಕಾಲಭೈರವೇಶ್ವರ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಗ್ರಾಮೀಣ ಬಡ ಭಕ್ತಾದಿಗಳ ಅನುಕೂಲಕ್ಕಾಗಿ ಸುಂದರವಾದ 'ಕಲ್ಯಾಣಸೌಧ' (ಸಮುದಾಯ ಭವನ) ನಿರ್ಮಿಸಿಕೊಡುವ ಮೂಲಕ ಶ್ಲಾಘನೀಯ ಸೇವೆ ಮಾಡಿದ್ದಾರೆ.

ಐದಾರು ವರ್ಷಗಳ ಸುದೀರ್ಘ ಕಾಯುವಿಕೆ ಮತ್ತು ಸಂಕಲ್ಪ:
ಗ್ರಾಮೀಣ ಭಾಗದ ಬಡ ಕುಟುಂಬಗಳ ಅಣ್ಣತಮ್ಮಂದಿರು ಆಸ್ತಿ ಭಾಗ ಮಾಡಿಕೊಂಡು, ಮನೆ ಮುಂದೆ ಅಂಗಳವೂ ಇಲ್ಲದೆ ಮಕ್ಕಳ ಮದುವೆ, ಮುಂಜಿ ಹಾಗೂ ಇತರೆ ಶುಭಕಾರ್ಯಗಳನ್ನು ಮಾಡಲು ಪಡುತ್ತಿದ್ದ ಪಾಡನ್ನು ಕಂಡು ಸಿದ್ದೇಶ್ ಗೌಡರ ಮನಸ್ಸು ಮಿಡಿದಿತ್ತು. ದೈವ ಸನ್ನಿಧಿಯಲ್ಲಿ ಒಂದು ಭವನ ಕಟ್ಟಲು ಅನುಮತಿಗಾಗಿ ಇವರು ಸರ್ಕಾರಿ ಕಚೇರಿಗಳಿಗೆ ಅಲೆದು ಐದಾರು ವರ್ಷಗಳೇ ಕಾಡಿದ್ದವು. ಕೊನೆಗೂ ಇವರ ಮನೆದೇವರ ಹೆಸರಿನಲ್ಲೇ ಬಂದ ಹೊಸ ತಹಸೀಲ್ದಾರ್ ಅವರ ಒಪ್ಪಿಗೆ ದೊರೆತು, ಕಳೆದ ಡಿಸೆಂಬರ್ 4 ರಿಂದ ಈ ಭವನದ ಕಾಯಕ ಆರಂಭವಾಯಿತು.

ಯಾವುದೇ ಗುತ್ತಿದೆ ನೀಡದೆ, ತಹಶೀಲ್ದಾರ್ ಅವರಿಗೆ ಕೊಟ್ಟ ಮಾತಿನಂತೆ ಸ್ವತಃ ಸಿದ್ದೇಶ್ ಗೌಡರೇ ಮೂರು ಹೊತ್ತು ನಿಂತು, ಕಟ್ಟಡಕ್ಕೆ ನೀರು ಹಾಕಿ (ಕ್ಯೂರಿಂಗ್), ಕೇವಲ ಎಂಟೇ ತಿಂಗಳಲ್ಲಿ ಗುಣಮಟ್ಟದ ಕಲ್ಯಾಣಸೌಧವನ್ನು ಪೂರ್ಣಗೊಳಿಸಿ ಕೀ ಒಪ್ಪಿಸಿದ್ದಾರೆ.

"ನಾ ಉಳಿಸಿದ್ದೇ ನನ್ನ ಆದಾಯ": ಮಿತವ್ಯಯದ ಮಹಾ ಪಾಠ:
ಈ ಕಲ್ಯಾಣಸೌಧದ ಹಿಂದೆ ಗೌಡರ ಇಡೀ ಬದುಕಿನ ಶಿಸ್ತು ಮತ್ತು ತ್ಯಾಗವಿದೆ. ಎಂದಿಗೂ ಮೋಜು-ಮಸ್ತಿ ಮಾಡದ, ಆಟೋ ಹತ್ತದ, ಕಾರು ಬಳಸದೆ ಸದಾ ಬಸ್‌ನಲ್ಲೇ ಪ್ರಯಾಣಿಸುವ ಸರಳ ಜೀವನ ಇವರದ್ದು. "ನಾ ಉಳಿಸಿದ್ದೇ ನನ್ನ ಆದಾಯ" ಎಂಬ ಘೋಷವಾಕ್ಯದೊಂದಿಗೆ ಬದುಕಿ, ಕೂಡಿಟ್ಟ ಅಲ್ಪಸ್ವಲ್ಪ ಹಣ ಮತ್ತು ತಮಗೆ ಬರುವ ಪೆನ್ಷನ್ ಮೊತ್ತವನ್ನೆಲ್ಲಾ ಸುರಿದು ಈ ಭವನ ನಿರ್ಮಿಸಿದ್ದಾರೆ.

ವಿಶೇಷವೆಂದರೆ, ಇವರ ಅಭ್ಯುದಯ ಸೇವಾ ಟ್ರಸ್ಟ್ಗೆ ಸಾರ್ವಜನಿಕರಿಂದ ಎಂದೂ ಒಂದು ರೂಪಾಯಿ ಚಂದಾ ಎತ್ತಿಲ್ಲ. ಇದು ಕೇವಲ ಸಿದ್ದೇಶ್ ಗೌಡರು ಮತ್ತು ಅವರ ಮಕ್ಕಳ ಸ್ವಂತ ದುಡಿಮೆಯ ಕೊಡುಗೆಯಾಗಿದೆ!.

news_1782741918_3_471.webp

 

news_1782741918_4_744.webp

 

ಹಿರಿಯರ ನೆನಪು - ನಿರಾಳ ಭಾವ:
"ನಾವು ಈ ಭೂಮಿ ಮೇಲೆ ಇಲ್ಲದಿದ್ದರೂ, ನಮಗೆ ಕಷ್ಟಪಟ್ಟು ಬದುಕು ಕೊಟ್ಟ ಹಿರಿಯರಿಗೆ ಏನಾದರೂ ತಿರುಗಿಸಿಕೊಡಬೇಕು. ಸಮಾಧಿಯಲ್ಲಿ ಮಲಗಿದಾಗ 'ನಿನಗೆ ಇಲ್ಲಿ ಜಾಗ ಇಲ್ಲಪ್ಪಾ' ಅನ್ನಿಸಿಕೊಳ್ಳಬಾರದು" ಎನ್ನುವ ಸಿದ್ದೇಶ್ ಗೌಡರು, ಇಂದು ತಮ್ಮ ಮನೆತನದ ಹಿರಿಯರಿಗೆ ಹಾಗೂ ಮನೆದೇವರ ಪಾದಕ್ಕೆ ಈ ಕಲ್ಯಾಣಸೌಧವನ್ನು ಒಪ್ಪಿಸಿ ನಿರಾಳ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

"ಮೊದ ಮೊದಲಿಗೆ ಸೇವೆ ಮಾಡಿದ್ದು ಸುದ್ದಿಯಾಗಬೇಕು. ನಾಲ್ಕಾರು ಜನಕ್ಕೆ ಅರಿವಾಗಿ ಪ್ರೇರಣೆಯಾಗಬೇಕು. ನಂತರ ಸದ್ದಿಲ್ಲದೆ ಸೇವೆ ಮುಂದುವರಿಯಬೇಕು. ಮುಂದೆ ಸೇವೆಯೇ ಸುದ್ದಿ ಮಾಡುತ್ತದೆ."
ಸ.ಸಿ (ಸಲವಮ್ಮನಹಳ್ಳಿ ಸಿದ್ದೇಶ್ ಗೌಡ).

ಆಪ್ತರ ಕಣ್ಣಲ್ಲಿ ಸಿದ್ದೇಶ್ ಗೌಡ:
"ಸಿದ್ದೇಶ ಅವನೇ ಒಂತರ ವಿಶೇಷ. ಬಹಳ ಅಭಿಮಾನದಿಂದ ನಮ್ಮನ್ನು ಕರೆದು
, ತನ್ನೆಲ್ಲಾ ಹಿರಿಯರ ಮುಖಾಂತರ ಈ ಸತ್ಕಾರ್ಯವನ್ನು ದೇವರಿಗೆ ಒಪ್ಪಿಸಿದ್ದಾನೆ. ಈ ಕಲ್ಯಾಣ ಸೌಧವನ್ನು ಬಹಳ ಚೆನ್ನಾಗಿಯೇ ಕಟ್ಟಿಸಿದ್ದಾನೆ, ಮೆಚ್ಚಲೇಬೇಕು. ಇದನ್ನು ಕಂಡು ಬಹಳ ಖುಷಿಯಾಯಿತು."
ಮದ ಹಿರಿಯರಾದ ತಿಪ್ಪೇರುದ್ರಪ್ಪ, ಸಲವಮ್ಮನಹಳ್ಳಿ.

ರಾಜಕೀಯ ಅದ್ಧೂರಿತನವಿಲ್ಲದೆ, ಕೇವಲ ಆತ್ಮೀಯ ಒಡನಾಡಿಗಳ ಸಮ್ಮುಖದಲ್ಲಿ ನಡೆದಿರುವ ಈ ಸರಳ ಸಮಾರಂಭ ಮತ್ತು ಸಿದ್ದೇಶ್ ಗೌಡರ ಈ ಮೂಗಸೇವೆ ಸಮಾಜದ ಇತರರಿಗೆ ನಿಜಕ್ಕೂ ದೊಡ್ಡ ಪ್ರೇರಣೆ. ಇವರ ಈ ಸೇವಾ ಕಾಯಕ ಹೀಗೆಯೇ ಮುಂದುವರಿಯಲಿ, ಇವರ ನಿರಾಳ ನೆಮ್ಮದಿಯ ಬದುಕು ಇತರರಿಗೆ ಮಾರ್ಗದರ್ಶಿಯಾಗಲಿ.

 

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.