ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಮತ್ತು ಪೌಷ್ಟಿಕತೆ ಒದಗಿಸಲು ಆರಂಭಿಸಲಾದ ‘ಅಕ್ಷರ ದಾಸೋಹ’ ಯೋಜನೆಗೆ 25 ವರ್ಷಗಳು ತುಂಬಿವೆ. ಆದರೆ, ಬೆಲೆ ಏರಿಕೆಗೆ ಅನುಗುಣವಾಗಿ ಅನುದಾನ ಹೆಚ್ಚಿಸದೆ ಖಾಸಗಿ ಸಂಸ್ಥೆಗಳಿಗೆ ಜವಾಬ್ದಾರಿ ವಹಿಸುವ ಮೂಲಕ ಯೋಜನೆಯನ್ನು ಬಲಹೀನಗೊಳಿಸಲಾಗುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಚಿತ್ರದುರ್ಗ ಜಿಲ್ಲಾ ಸಮಿತಿ-ಸಿಐಟಿಯು), ಜುಲೈ 10 ರಂದು ‘ಸ್ಕೀಮ್ ನೌಕರರ ಕರಾಳ ದಿನಾಚರಣೆ’ಯ ಅಂಗವಾಗಿ ಒಂದು ದಿನದ ಮುಷ್ಕರ ನಡೆಸಿ ಮಾನ್ಯ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರ ಸಲ್ಲಿಸಿದೆ.
ಕಳೆದ 2008 ರಿಂದಲೂ ಕೇಂದ್ರ ಸರ್ಕಾರವು ಈ ಬಡ ಮಹಿಳಾ ಕಾರ್ಮಿಕರಿಗೆ ವೇತನ ಹೆಚ್ಚಳ ಮಾಡದೆ ಶೋಷಣೆ ಮಾಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ ಭರವಸೆಯಂತೆ ಬಿಸಿಯೂಟ ಕಾರ್ಮಿಕರಿಗೆ ತಕ್ಷಣವೇ ವೇತನ ಹೆಚ್ಚಳ ಮಾಡಬೇಕು ಹಾಗೂ ವಿವಿಧ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಂಘಟನೆಯು ಒತ್ತಾಯಿಸಿದೆ.
ಬಿಸಿಯೂಟ ನೌಕರರ ಪ್ರಮುಖ ಬೇಡಿಕೆಗಳು:
ವೇತನ ಹೆಚ್ಚಳ: ಕಾಂಗ್ರೆಸ್ ಪಕ್ಷ ನೀಡಿದ ಭರವಸೆಯಂತೆ ಬಿಸಿಯೂಟ ಕಾರ್ಮಿಕರಿಗೆ ತಕ್ಷಣವೇ 7,000 ರೂ.ಗಳ ವೇತನ ಹೆಚ್ಚಳ ಮಾಡಬೇಕು.
ಕೆಲಸದ ಅವಧಿ: ಈಗಾಗಲೇ 6 ಗಂಟೆಗಳ ಕಾಲ ಕೆಲಸ ಮಾಡುತ್ತಿರುವ ನೌಕರರ ಕೆಲಸದ ಅವಧಿಗೆ ಸಂಬಂಧಿಸಿದಂತೆ ಅಧಿಕೃತ ಸುತ್ತೋಲೆ ಹೊರಡಿಸಬೇಕು.
ಸಾಮಾಜಿಕ ಭದ್ರತೆ: ನೌಕರರಿಗೆ ತಕ್ಷಣವೇ ಆರೋಗ್ಯ ವಿಮೆ ಜಾರಿ ಮಾಡಬೇಕು ಮತ್ತು ಮಾಸಿಕ 10 ಸಾವಿರ ರೂ. ಪಿಂಚಣಿ ನೀಡಬೇಕು.
ಖಾತೆ ಜವಾಬ್ದಾರಿ ಬದಲಾವಣೆ: ಸಾದಿಲ್ವಾರು ಜಂಟಿ ಖಾತೆ ಜವಾಬ್ದಾರಿಯನ್ನು ಮುಖ್ಯ ಅಡುಗೆ ನೌಕರರಿಂದ ಎಸ್‌ಡಿಎಂಸಿಗೆ ವರ್ಗಾವಣೆ ಮಾಡಿರುವ ಕ್ರಮವನ್ನು ಹಿಂಪಡೆದು, ಮೊದಲಿನಂತೆಯೇ ಮುಂದುವರಿಸಬೇಕು.
ಉದ್ಯೋಗ ಭದ್ರತೆ: ಕೆಪಿಎಸ್ ಶಾಲೆ, ಇಸ್ಕಾನ್, ಮಠ ಹಾಗೂ ಇನ್ನಿತರ ಸಂಸ್ಥೆಗಳಿಂದಾಗಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿರುವ ಬಿಸಿಯೂಟ ನೌಕರರಿಗೆ ಉದ್ಯೋಗ ಭದ್ರತೆ ಒದಗಿಸಬೇಕು ಮತ್ತು ಎಂಡಿಎಂ ಯೋಜನೆಗೆ ಅನುದಾನ ಹೆಚ್ಚಿಸಬೇಕು.
ಕೇಂದ್ರಗಳ ಸುಸಜ್ಜಿತಗೊಳಿಸುವಿಕೆ: ಎಲ್ಲಾ ಜಿಲ್ಲೆಗಳಲ್ಲಿ ನಿವೃತ್ತಿ ಹೊಂದಿದ ನೌಕರರ ಜಾಗಕ್ಕೆ ತಕ್ಷಣವೇ ನೇಮಕಾತಿ ಮಾಡಿಕೊಳ್ಳಬೇಕು. ಅಡುಗೆ ಕೇಂದ್ರಗಳು ಸುಸಜ್ಜಿತವಾಗಿಲ್ಲದ ಕಡೆ ಉತ್ತಮ ಕಟ್ಟಡ ಹಾಗೂ ಗ್ಯಾಸ್, ವಿದ್ಯುತ್ ಮತ್ತು ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು.
ರಜೆ ದಿನಗಳ ವೇತನ: ಬೇಸಿಗೆ ಮತ್ತು ದಸರಾ ರಜೆ ದಿನಗಳೂ ಸೇರಿದಂತೆ ವರ್ಷದ ಎಲ್ಲಾ 12 ತಿಂಗಳುಗಳ ಕಾಲ ಕನಿಷ್ಠ ಕೂಲಿ ಒದಗಿಸಬೇಕು ಮತ್ತು ರಜೆ ದಿನಗಳ ವೇತನವನ್ನು ಕಡಿತಗೊಳಿಸಬಾರದು.
ಅಪಘಾತ ಪರಿಹಾರ: ಅಡುಗೆ ಕೆಲಸದ ಅವಧಿಯಲ್ಲಿ ಅಪಘಾತದಿಂದ ಮರಣ ಹೊಂದಿದರೆ ಅವರ ಕುಟುಂಬದವರಿಗೆ ಕೆಲಸ ನೀಡಬೇಕು ಮತ್ತು ಅಪಘಾತಕ್ಕೀಡಾಗಿ ಮರಣ ಹೊಂದಿದಲ್ಲಿ 25 ಲಕ್ಷ ರೂ.ಗಳ ಪರಿಹಾರ ನೀಡಬೇಕು.
ಅನುಕಂಪದ ಆಧಾರದ ನೇಮಕಾತಿ: ನಿವೃತ್ತಿ ಹೊಂದಿದ ಅಡುಗೆ ಸಿಬ್ಬಂದಿಗಳ ಕುಟುಂಬದವರಿಗೆ ಕೆಲಸ ನೀಡಬೇಕು ಮತ್ತು ಪ್ರತಿ ಶಾಲೆಯಲ್ಲಿ ಕನಿಷ್ಠ ಇಬ್ಬರು ಅಡುಗೆ ನೌಕರರಿರಬೇಕು.
"ಇಸ್ಕಾನ್ ಸಂಸ್ಥೆಗೆ ಬಿಸಿಯೂಟ ನೀಡುವ ಪ್ರಸ್ತಾವನೆಯನ್ನು ಸರ್ಕಾರ ಕೈಬಿಡಬೇಕು. ನಮ್ಮ ಹಕ್ಕುಗಳ ಉಳಿವಿಗಾಗಿ ಮತ್ತು ಸಾಮಾಜಿಕ ಭದ್ರತೆಗಾಗಿ ದೇಶಾದ್ಯಂತ ಬಿಸಿಯೂಟ ನೌಕರರು ಹೋರಾಟ ನಡೆಸುತ್ತಿದ್ದು, ಸರ್ಕಾರ ತಕ್ಷಣವೇ ಸ್ಪಂದಿಸಬೇಕು" ಎಂದು ಸಂಘದ ಪದಾಧಿಕಾರಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲಿಯಪ್ಪ ಮೇಸ್ತ್ರಿ, ಮುಖ್ಯ ಸಂಚಾಲಕಿ ಡಿ.ಎಂ. ಮುನಿಯಮ್ಮ, ರಾಜ್ಯ ಉಪಾಧ್ಯಕ್ಷೆ ಸಿ. ಯೆಂಕಮ್ಮ, ಚಿತ್ರದುರ್ಗ ಜಿಲ್ಲಾ ಸಮಿತಿಯ ಮುಖ್ಯ ಸಂಚಾಲಕಿ ರತ್ನಮ್ಮ, ತಿಪ್ಪೇಸ್ವಾಮಿ, ಅನುಸೂಯಮ್ಮ, ಮಂಜುಳಮ್ಮ ಮತ್ತು ಪಾರ್ವತಮ್ಮ, ನಿಂಗಪ್ಪ, ಕೆ.ವಿಜಯಪ್ಪ ಮತ್ತಿತರರು ಒತ್ತಾಯಿಸಿದ್ದಾರೆ.



