Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ಕಾರಕ್ಕೆ ಮೊದಲ ಶಾಕ್: ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ!

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಆರಂಭದಲ್ಲೇ ಭಾರಿ ಆಘಾತ ಎದುರಾಗಿದೆ.

ಖಾತೆ ಹಂಚಿಕೆ ಬೆನ್ನಲ್ಲೇ ತೀವ್ರ ಅಸಮಾಧಾನಗೊಂಡಿರುವ ಪಕ್ಷದ ಹಿರಿಯ ನಾಯಕ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರು ತಮ್ಮ ಸಚಿವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾವು ನಿರೀಕ್ಷಿಸಿದ್ದ 'ಬೆಂಗಳೂರು ನಗರಾಭಿವೃದ್ಧಿ' ಖಾತೆ ಸಿಗದ್ದಕ್ಕೆ ನೊಂದು ಈ ನಿರ್ಧಾರ ಕೈಗೊಂಡಿರುವುದಾಗಿ ಪ್ರಕಟಿಸಿದ್ದಾರೆ. ಈಗಾಗಲೇ ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗಳಿಗೆ ರವಾನಿಸಿರುವುದಾಗಿಯೂ ಅವರು ಸ್ಪಷ್ಟಪಡಿಸಿದ್ದಾರೆ.

ಮಾತು ಮುರಿದ ಸಿಎಂ: ರೆಡ್ಡಿ ಆಕ್ರೋಶ:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೊದಲ ಹಂತದ ಸಚಿವ ಸಂಪುಟ ಸದಸ್ಯರಿಗೆ ಖಾತೆ ಹಂಚಿಕೆ ಮಾಡಿದ್ದರು. ಈ ವೇಳೆ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಸಿಎಂ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ತೀವ್ರ ಬೇಸರ ಹೊರಹಾಕಿದ ರಾಮಲಿಂಗಾರೆಡ್ಡಿ, ಸಿಎಂ ವಿರುದ್ಧ ನೇರವಾಗಿಯೇ ವಾಗ್ದಾಳಿ ನಡೆಸಿದರು.

ರಾಮಲಿಂಗಾರೆಡ್ಡಿ ಅವರ ಆಕ್ರೋಶದ ನುಡಿಗಳು:
"
ಹಿಂದೆ ಸಿದ್ದರಾಮಯ್ಯನವರ ಸಂಪುಟದಲ್ಲಿ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಡಿ.ಕೆ. ಶಿವಕುಮಾರ್ ಅವರೇ ಇಟ್ಟುಕೊಂಡಿದ್ದರು. ಆದರೆ, ತಾವು ಮುಖ್ಯಮಂತ್ರಿಯಾದ ಬಳಿಕ ಆ ಖಾತೆಯನ್ನು ನನಗೆ ನೀಡುವುದಾಗಿ ಸ್ವತಃ ಡಿಕೆಶಿ ಎರಡು ಬಾರಿ ಕರೆದು ಮಾತು ಕೊಟ್ಟಿದ್ದರು. ಈಗ ಅವರು ಮಾತು ಮುರಿದಿದ್ದಾರೆ. ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ನಾನು ಕೆಲಸ ಮಾಡುವುದಿಲ್ಲ. ನನಗೆ ತೀವ್ರ ನೋವಾಗಿದ್ದರಿಂದಲೇ ಈ ನಿರ್ಧಾರ ಕೈಗೊಂಡಿದ್ದೇನೆ."

"ನನಗೆ ಎರಡು ಬಾರಿ ಮೋಸವಾಗಿದೆ":
ತಮ್ಮ ಸುದೀರ್ಘ ರಾಜಕೀಯ ಪಯಣವನ್ನು ನೆನಪಿಸಿಕೊಂಡ ರಾಮಲಿಂಗಾರೆಡ್ಡಿ, ತಮಗೆ ಅನ್ಯಾಯವಾಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು:

ಸ್ವಯಂ ಲಾಬಿ ಮಾಡಿಲ್ಲ: "ನಾನು 1973 ರಲ್ಲಿ ವಿದ್ಯಾರ್ಥಿ ನಾಯಕನಾಗಿ ರಾಜಕೀಯಕ್ಕೆ ಬಂದವನು. ಅಂದು ವೀರಪ್ಪ ಮೊಯ್ಲಿ ಅವರು ಕರೆದು ಟಿಕೆಟ್ ಕೊಟ್ಟಿದ್ದರು. ನಾನು ಆರು ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಯಾರ ಬಳಿಯೂ ಇಂತಹುದೇ ಖಾತೆ ಬೇಕು ಎಂದು ನಾನು ಎಂದಿಗೂ ಲಾಬಿ ಮಾಡಿಲ್ಲ."

ಭರವಸೆ ಕೊಟ್ಟು ಕೈಕೊಟ್ಟರು: "ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಹಿಂದಿನ ದಿನವೂ ನಾನು ಅವರನ್ನು ಭೇಟಿಯಾಗಿದ್ದೆ. ನನಗೆ ಮಂತ್ರಿ ಮಾಡಿ ಎಂದು ನಾನು ಕೇಳಿರಲಿಲ್ಲ. ಅವರೇ ಬೆಂಗಳೂರು ಅಭಿವೃದ್ಧಿ ಖಾತೆ ಕೊಡುವುದಾಗಿ ಭರವಸೆ ನೀಡಿ, ಈಗ ಮಾತು ತಪ್ಪಿದ್ದಾರೆ. ನನಗೆ ಎರಡು ಬಾರಿ ಮೋಸವಾಗಿದೆ," ಎಂದು ಅಸಮಾಧಾನ ಹೊರಹಾಕಿದರು.

ಖಾತೆ ಹಂಚಿಕೆಯ ಬೆನ್ನಲ್ಲೇ ಹಿರಿಯ ನಾಯಕರೊಬ್ಬರು ಬಂಡಾಯವೆದ್ದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಹೊಸ ಸರ್ಕಾರದ ವಲಯದಲ್ಲಿ ತಲ್ಲಣ ಮೂಡಿಸಿದ್ದು, ಮುಖಂಡರ ಸಂಧಾನ ಯತ್ನಗಳು ಆರಂಭವಾಗುವ ಸಾಧ್ಯತೆ ಇದೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.