ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಗೆಜ್ಜೆಗದಹಳ್ಳಿಯಲ್ಲಿ ರಸ್ತೆ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಳಲು ತೋಡಿಕೊಳ್ಳಲು ಬಂದ ಸಾರ್ವಜನಿಕರ ಮೇಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ನವೀನ್ ಕುಮಾರ್ ಅವರು ಧಮ್ಕಿ ಹಾಕಿ, ನಿಂದಿಸಿರುವ ಗಂಭೀರ ಆರೋಪ ಕೇಳಿಬಂದಿದೆ.
ವರ್ಷಗಳಿಂದ ರಸ್ತೆ ಮತ್ತು ಚರಂಡಿ ಒತ್ತುವರಿ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುವ ಸ್ಥಳೀಯರು, ನ್ಯಾಯಕ್ಕಾಗಿ ಠಾಣೆಯ ಮೆಟ್ಟಿಲೇರಿದ್ದರು. ಆದರೆ, ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿ ಸಾಂತ್ವನ ಹೇಳಬೇಕಿದ್ದ ಪೊಲೀಸ್ ಅಧಿಕಾರಿಯೇ ಏಕವಚನದಲ್ಲಿ ನಿಂದಿಸಿ, ಬೆದರಿಕೆ ಹಾಕಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ವಿಡಿಯೋದಲ್ಲೇನಿದೆ? ಘಟನೆಯ ವಿವರ:
ಬೆದರಿಕೆ ಮತ್ತು ಆವಾಜ್: ಸಾರ್ವಜನಿಕರು ತಮ್ಮ ಸಮಸ್ಯೆಯನ್ನು ವಿವರಿಸಲು ಮುಂದಾದಾಗ, ಇನ್ಸ್ಪೆಕ್ಟರ್ ನವೀನ್ ಕುಮಾರ್ ಅವರು “ಸುಮ್ನೆ ಇರಿ” ಎಂದು ಧಮ್ಕಿ ಹಾಕಿದ್ದಾರೆ.
ಮಾಧ್ಯಮಗಳ ಎಚ್ಚರಿಕೆ: ಮಾಧ್ಯಮದವರ ಮುಂದೆ ಪೋಸ್ ನೀಡಲು ಬಂದರೆ “ಗ್ರಹಚಾರ ಬಿಡಿಸುತ್ತೇನೆ” ಎಂದು ಗದರಿದ್ದಾರೆ.
ಅಪಮಾನ: ಠಾಣೆಗೆ ಬಂದು ನ್ಯಾಯ ಕೇಳಿದ ಜನರನ್ನು “ಇಡಿಯಟ್ಸ್” ಎಂದು ಜರಿದು, ಅವರ ವರ್ಷಗಳ ಸುದೀರ್ಘ ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ.
ಪ್ರಶ್ನೆಗಳ ಸುರಿಮಳೆ: ಸಾರ್ವಜನಿಕರು ತಮ್ಮ ಅಳಲು ತೋಡಿಕೊಂಡಾಗ, “ನಾನು ಮಾಡ್ಸತಾ ಇಲ್ವಾ ಇಲ್ಲಿ?” ಎಂದು ಉಡಾಫೆಯಿಂದ ಪ್ರಶ್ನಿಸಿದ್ದು, ಸಾರ್ವಜನಿಕರು ಮಾತನಾಡದಂತೆ “ಮಾತಾಡಬೇಡ” ಎಂದು ಪದೇ ಪದೇ ತರಾಟೆಗೆ ತೆಗೆದುಕೊಂಡಿದ್ದಾರೆ.
ಪೊಲೀಸ್ ಇಲಾಖೆಯು ಜನಸ್ನೇಹಿಯಾಗಿರಬೇಕಾದ ಜಾಗದಲ್ಲಿ, ಸಾರ್ವಜನಿಕರ ಧ್ವನಿಯನ್ನು ಅಡಗಿಸಿ, ಅಧಿಕಾರಿಯೊಬ್ಬರು ಈ ರೀತಿಯ ದುರ್ವರ್ತನೆ ತೋರಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕೂಡಲೇ ಹಿರಿಯ ಅಧಿಕಾರಿಗಳು ಇನ್ಸ್ಪೆಕ್ಟರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.




