ಚಂದ್ರವಳ್ಳಿ ನ್ಯೂಸ್, ಬಾಪಟ್ಲಾ (ಆಂಧ್ರಪ್ರದೇಶ):
"ನನ್ನ ಕೊನೆಯುಸಿರು ಇರುವವರೆಗೂ ನಾನು ನನ್ನ ಮಾತೃಭೂಮಿಯಲ್ಲೇ ಇರಬೇಕು. ಸಾಯುವಾಗ ನಾನು ಒಬ್ಬ ಭಾರತೀಯ ಪ್ರಜೆಯಾಗಿಯೇ ಕಣ್ಣು ಮುಚ್ಚಬೇಕು…" – ಇದು ಅಮೆರಿಕದಂತಹ ಐಷಾರಾಮಿ ದೇಶದ ಗ್ರೀನ್ ಕಾರ್ಡ್ ಹಾಗೂ ಪೌರತ್ವವನ್ನು ಸ್ವಇಚ್ಛೆಯಿಂದ ತ್ಯಜಿಸಿ ಬಂದ ಆಂಧ್ರಪ್ರದೇಶದ 94 ವರ್ಷದ ವೃದ್ಧೆಯೊಬ್ಬರ ಭಾವನಾತ್ಮಕ ನುಡಿಗಳು.
ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ಕೊಂಡ್ರಗುಂಟ ಮಹಾಲಕ್ಷ್ಮಮ್ಮ ಎಂಬ ವೃದ್ಧೆ, ತಮಗೆ ಭಾರತದ ಪೌರತ್ವವನ್ನು ಮರುಸ್ಥಾಪಿಸಿಕೊಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಹಿರಿಯ ಪತ್ರಕರ್ತೆ ನಬಿಲಾ ಜಮಾಲ್ ಅವರು ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ಈ ವೃದ್ಧೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ದೇಶಪ್ರೇಮದ ಹೊಸ ಅಲೆ ಎಬ್ಬಿಸಿದೆ.
2000 ಇಸವಿಯಲ್ಲೇ ಸಿಕ್ಕಿತ್ತು ಯುಎಸ್ ಸಿಟಿಜನ್‌ಶಿಪ್:
ಮಹಾಲಕ್ಷ್ಮಮ್ಮ ಅವರು ಕಳೆದ 2000ನೇ ಇಸವಿಯಲ್ಲಿ ಅಮೆರಿಕದ ಪೌರತ್ವ ಪಡೆದುಕೊಂಡಿದ್ದರು. ಆ ಬಳಿಕ ಸುಮಾರು 18 ವರ್ಷಗಳ ಕಾಲ ಅಮೆರಿಕದ ಅತ್ಯಾಧುನಿಕ ಹಾಗೂ ಐಷಾರಾಮಿ ಸೌಲಭ್ಯಗಳ ನಡುವೆಯೇ ತಮ್ಮ ಮಕ್ಕಳ ಕುಟುಂಬದೊಂದಿಗೆ ಸುಖವಾಗಿ ವಾಸವಾಗಿದ್ದರು.
ವಯಸ್ಸಾಗುತ್ತಿದ್ದಂತೆ ಕಾಡಿದ ತಾಯ್ನಾಡಿನ ನೆನಪು!:
ಅಮೆರಿಕದಲ್ಲಿ ಎಲ್ಲಾ ಸೌಕರ್ಯಗಳಿದ್ದರೂ, ವಯಸ್ಸಾಗುತ್ತಿದ್ದಂತೆ ಮಹಾಲಕ್ಷ್ಮಮ್ಮ ಅವರಿಗೆ ತನ್ನ ಸ್ವಗ್ರಾಮ, ಹೆತ್ತ ಕರುಳು ಹಾಗೂ ತಾಯ್ನಾಡಿನ ಮಣ್ಣಿನ ನೆನಪು ತೀವ್ರವಾಗಿ ಕಾಡಲಾರಂಭಿಸಿದೆ. ಪರಕೀಯರ ದೇಶದಲ್ಲಿ ಸಾಯುವುದಕ್ಕಿಂತ ಸ್ವದೇಶದ ಮಣ್ಣಿನಲ್ಲಿ ಕೊನೆಯುಸಿರೆಳೆಯಬೇಕು ಎಂಬ ಹಂಬಲ ಅವರಲ್ಲಿ ಹೆಚ್ಚಾಗಿದೆ. ಅದಕ್ಕಾಗಿಯೇ ಅವರು ತಡಮಾಡದೇ ಕಳೆದ 2018ರಲ್ಲಿಯೇ ಅಮೆರಿಕವನ್ನು ಶಾಶ್ವತವಾಗಿ ತೊರೆದು ಭಾರತಕ್ಕೆ ಮರಳಿದ್ದರು.
ಭಾರತದ ಪೌರತ್ವಕ್ಕಾಗಿ ಸರ್ಕಾರದ ಮುಂದೆ ವಿನಂತಿ:
"ನನಗೆ ಅಮೆರಿಕದ ಐಷಾರಾಮಿ ಬದುಕು ಬೇಡ. ನನ್ನ ದೇಶದ ಮಣ್ಣಿನಲ್ಲಿ ಸಾಯುವ ಭಾಗ್ಯ ಸಿಕ್ಕರೆ ಸಾಕು" ಎಂದು ಕಣ್ಣೀರು ಹಾಕುತ್ತಿರುವ ವೃದ್ಧೆ, ತಮಗೆ ಕಾನೂನುಬದ್ಧವಾಗಿ ಮತ್ತೆ ಭಾರತದ ಪೌರತ್ವ ನೀಡುವಂತೆ ಸರ್ಕಾರವನ್ನು ಕೋರಿದ್ದಾರೆ.
ಭಾರತದ ಕಾನೂನಿನ ಪ್ರಕಾರ ದ್ವಿಪೌರತ್ವಕ್ಕೆ ಅವಕಾಶವಿಲ್ಲದ ಕಾರಣ, ವಿದೇಶಿ ಪೌರತ್ವ ಪಡೆದಾಗ ಭಾರತದ ಪೌರತ್ವ ರದ್ದಾಗುತ್ತದೆ. ಇದೀಗ ತಾಂತ್ರಿಕ ಪ್ರಕ್ರಿಯೆಗಳನ್ನು ಪೂರೈಸಿ ತಮಗೆ ಸಂಪೂರ್ಣ ಭಾರತೀಯ ಪ್ರಜೆಯೆಂಬ ಹೆಗ್ಗಳಿಕೆ ನೀಡಿ ಎಂದು 94ರ ವೃದ್ಧೆ ಮಗುವಿನಂತೆ ಆಶಿಸುತ್ತಿರುವುದು ಕೋಟ್ಯಂತರ ಭಾರತೀಯರ ಹೃದಯ ಸ್ಪರ್ಶಿಸುತ್ತಿದೆ.



