ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮಗಳ ಕುರಿತು ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ (ಬಿಜೆಪಿ-ಜೆಡಿಎಸ್) ನಾಯಕರ ನಡುವೆ ತೀವ್ರ ವಾಕ್ಸಮರ ಶುರುವಾಗಿದೆ. "ಕಾಂಗ್ರೆಸ್ ಅನ್ನು ಮುಗಿಸಲೆಂದೇ ನಾವು ಬಿಜೆಪಿ ಜೊತೆ ಕೈಜೋಡಿಸಿದ್ದೇವೆ" ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನೇರವಾಗಿಯೇ ಸವಾಲು ಹಾಕಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮದ ಕುರಿತು ಸೋಮವಾರ ಮುಖ್ಯ ಚುನಾವಣಾ ಆಯುಕ್ತರಿಗೆ ಜಂಟಿ ದೂರು ನೀಡಿದ ಬಳಿಕ ಉಭಯ ಪಕ್ಷಗಳ ನಾಯಕರು ಪರಸ್ಪರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ದ್ವಂದ್ವ ನೀತಿಯನ್ನು ಪ್ರಶ್ನಿಸಿದ ಕುಮಾರಸ್ವಾಮಿ:
"ದೇಶದ ಇತರೆಡೆ ಇಂತಹ ಪ್ರಕ್ರಿಯೆಗಳು ನಡೆದಾಗ ಕೇಂದ್ರ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಮುಗಿಬೀಳುವ ಕಾಂಗ್ರೆಸ್‌ನ ಮಹಾನ್ ನಾಯಕರು, ಈಗ ಕರ್ನಾಟಕದಲ್ಲಿ ತಾವೇ ಮಾಡುತ್ತಿರುವುದರ ಬಗ್ಗೆ ಯಾಕೆ ಮೌನವಾಗಿದ್ದಾರೆ?" ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ರಾಜ್ಯ ಸರ್ಕಾರದ ಅಧೀನದಲ್ಲಿರುವ ಅಧಿಕಾರಿಗಳ ಮೂಲಕವೇ ಈ ಅಕ್ರಮ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಅವರು, "ವಿಪಕ್ಷಗಳು ಇರುವುದೇ ಟೀಕೆ ಮಾಡಲು" ಎಂಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ಹಾಗಿದ್ದಲ್ಲಿ, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಟೀಕೆಗಳು ಬರೀ ರಾಜಕೀಯ ಗಿಮಿಕ್ ಎಂದರು.
"ಕುಮಾರಸ್ವಾಮಿ ಬಿಜೆಪಿಯ ಹರಕೆಯ ಕುರಿ" ಎಂದ ಬಿ.ಕೆ. ಹರಿಪ್ರಸಾದ್:
ಮೈತ್ರಿ ನಾಯಕರ ಆರೋಪಗಳಿಗೆ ತಿರುಗೇಟು ನೀಡಿದ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್, ಕುಮಾರಸ್ವಾಮಿ ಅವರು ಬಿಜೆಪಿಯ ದಾಳವಾಗಿ ಬಳಕೆಯಾಗುತ್ತಿದ್ದಾರೆ ಎಂದು ಲೇವಡಿ ಮಾಡಿದರು.
"ದೇಶದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಬಿಜೆಪಿ ಹೇಗೆ ಮುಗಿಸುತ್ತಿದೆ ಎಂಬುದಕ್ಕೆ ಮಹಾರಾಷ್ಟ್ರದ ಶಿವಸೇನೆ, ದೆಹಲಿಯ ಆಪ್, ಬಂಗಾಳದ ಟಿಎಂಸಿ ಹಾಗೂ ಬಿಹಾರದ ನಿತೀಶ್ ಕುಮಾರ್ ಅವರ ಪಕ್ಷಗಳೇ ಸಾಕ್ಷಿ. ಇಷ್ಟೆಲ್ಲಾ ಗೊತ್ತಿದ್ದೂ ಇಡೀ ದೇಶದಲ್ಲೇ ಕಟ್ಟಕಡೆಯ ಪ್ರಾದೇಶಿಕ ಪಕ್ಷವಾಗಿ ಉಳಿದಿರುವ ಜೆಡಿಎಸ್ ಅನ್ನು ಕುಮಾರಸ್ವಾಮಿ ಅವರು ಬಿಜೆಪಿಯ ಪಾಲಾಗಿಸುತ್ತಿದ್ದಾರೆ. ಪ್ರಲ್ಹಾದ್ ಜೋಶಿಯವರಂತಹ ನಾಯಕರು ಕುಮಾರಸ್ವಾಮಿ ಅವರನ್ನು ಹರಕೆಯ ಕುರಿಯನ್ನಾಗಿ ಮಾಡುತ್ತಿದ್ದಾರೆ," ಎಂದು ಬಿ.ಕೆ. ಹರಿಪ್ರಸಾದ್ ಆತಂಕ ವ್ಯಕ್ತಪಡಿಸಿದರು.
"ನಿಮ್ಮನ್ನು ಮುಗಿಸೋಕೆ ಮೈತ್ರಿ ಮಾಡಿಕೊಂಡಿದ್ದೇವೆ": ಎಚ್‌ಡಿಕೆ ಖಡಕ್ ಕೌಂಟರ್
ಬಿಜೆಪಿಯವರು ಜೆಡಿಎಸ್ ಅನ್ನು ನುಂಗಿ ನೀರು ಕುಡಿಯುತ್ತಾರೆ ಎಂಬ ಹರಿಪ್ರಸಾದ್ ಅವರ ಹೇಳಿಕೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅತ್ಯಂತ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ. "ನಿಮ್ಮನ್ನು (ಕಾಂಗ್ರೆಸ್) ಮುಗಿಸೋಕೆ ನಾವು ಬಿಜೆಪಿ ಜೊತೆ ಕೈಜೋಡಿಸಿದ್ದು. ನಾವು ಮೈತ್ರಿ ಮಾಡಿಕೊಂಡಿರುವುದೇ ಆ ಏಕೈಕ ಉದ್ದೇಶಕ್ಕೆ," ಎಂದು ಹೇಳುವ ಮೂಲಕ ಜೆಡಿಎಸ್-ಬಿಜೆಪಿ ಮೈತ್ರಿಯ ಅಸಲಿ ಗುರಿಯನ್ನು ಬಹಿರಂಗಪಡಿಸಿದರು.
ದೋಷಪೂರಿತ ಮತದಾರರ ಪಟ್ಟಿ ಸೃಷ್ಟಿಯಾಗುವ ಆತಂಕ:
ಇದೇ ವೇಳೆ, ರಾಜ್ಯದಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆಯಲ್ಲಿ ತೀವ್ರ ಅಕ್ರಮಗಳು ನಡೆಯುತ್ತಿರುವುದರಿಂದ ವಿಶ್ವಾಸಾರ್ಹವಲ್ಲದ ಹಾಗೂ ದೋಷಪೂರಿತ ಮತದಾರರ ಪಟ್ಟಿ ಸೃಷ್ಟಿಯಾಗುವ ದೊಡ್ಡ ಅಪಾಯವಿದೆ ಎಂದು ಮೈತ್ರಿ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ.
ಸೋಮವಾರ ರಾಜ್ಯ ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿದ ಉನ್ನತ ಮಟ್ಟದ ನಿಯೋಗದಲ್ಲಿ ಕೇಂದ್ರ ಸಚಿವರಾದ ಎಚ್.ಡಿ ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ಮಾಜಿ ಸಿಎಂ ಡಿ.ವಿ ಸದಾನಂದ ಗೌಡ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ಪ್ರಮುಖ ನಾಯಕರು ಹಾಜರಿದ್ದು, ದಾಖಲೆ ಸಮೇತ ದೂರು ಸಲ್ಲಿಸಿದರು.



