ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಅಧಿಕಾರ ಇರುವುದೇ ಭ್ರಷ್ಟಾಚಾರ ನಡೆಸಲು ಎನ್ನುವುದು ಕಾಂಗ್ರೆಸ್ ಪಕ್ಷದ ಏಕೈಕ ತತ್ವ ಮತ್ತು ಸಿದ್ಧಾಂತ" ಎಂದು ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಟ್ವಿಟರ್ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ಅವರು, ಈಗಾಗಲೇ ಭ್ರಷ್ಟಾಚಾರದಲ್ಲಿ ಮುಳುಗೆದ್ದಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮತ್ತೊಂದು ಹೊಸ ಹಗರಣ ಬೆಳಕಿಗೆ ಬಂದಿದೆ ಎಂದು ಆರೋಪಿಸಿದ್ದಾರೆ.
ಹೊಲಿಗೆ ಯಂತ್ರ ವಿತರಣೆಯಲ್ಲೂ ಲೂಟಿ ಆರೋಪಛ
"ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಸಿದ್ದು ಸಾಲದು ಎಂಬಂತೆ, ಈಗ ದೇವರಾಜ ಅರಸು ನಿಗಮದಲ್ಲೂ ಲೂಟಿ ಮಾಡಲಾಗಿದೆ. ಹಿಂದುಳಿದ ವರ್ಗಗಳ ಮಹಿಳೆಯರಿಗೆ ಸ್ವಾವಲಂಬನೆಗಾಗಿ ನೀಡುವ ಹೊಲಿಗೆ ಯಂತ್ರಗಳ ವಿತರಣೆಯಲ್ಲೂ ಕಾಂಗ್ರೆಸ್ ಸರ್ಕಾರ ಕೈಯಿಟ್ಟಿದೆ. ಮಾರುಕಟ್ಟೆಯಲ್ಲಿ ಕೇವಲ 10,000 ರೂಪಾಯಿ ಬೆಲೆ ಬಾಳುವ ಹೊಲಿಗೆ ಯಂತ್ರಕ್ಕೆ ಬರೋಬ್ಬರಿ 17,000 ರೂಪಾಯಿ ನೀಡಿ ಟೆಂಡರ್ ಕರೆಯಲಾಗಿದೆ," ಎಂದು ಸಿ.ಟಿ. ರವಿ ದೂರಿದ್ದಾರೆ.
ಕೂಲಂಕಷ ತನಿಖೆಗೆ ಆಗ್ರಹಛ
ಇದು ಸಣ್ಣ ಮಟ್ಟದ ಹಗರಣವಲ್ಲ, ಇದರ ಹಿಂದೆ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ. ಹಾಗಾಗಿ ಈ ಟೆಂಡರ್ ಪ್ರಕ್ರಿಯೆಯ ಕುರಿತು ತಕ್ಷಣವೇ ಕೂಲಂಕಷ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಜನರ ಕಲ್ಯಾಣಕ್ಕಾಗಿ ಮತ್ತು ಸಮಾಜದ ಮುಖ್ಯವಾಹಿನಿಗೆ ತರಲು ಕಾರ್ಯಾಚರಿಸಬೇಕಾದ ವಿವಿಧ ನಿಗಮ ಮಂಡಳಿಗಳ ಪ್ರಯೋಜನಗಳು ಅರ್ಹ ಜನರಿಗೆ ತಲುಪುತ್ತಿಲ್ಲ. ಬದಲಿಗೆ, ಈ ಯೋಜನೆಗಳ ಲಾಭವೆಲ್ಲವೂ ಕಾಂಗ್ರೆಸ್ ಕೃಪಾಪೋಷಿತ ಭ್ರಷ್ಟಾಚಾರಿಗಳು ಹಾಗೂ ಲೂಟಿಕೋರರ ಪಾಲಾಗುತ್ತಿದೆ ಎಂದು ಅವರು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.



