ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಕರ್ನಾಟಕ ರಾಜಕಾರಣದ ಧೀಮಂತ ನಾಯಕ, ಸೌಮ್ಯ ಹಾಗೂ ಸರಳ ಸಜ್ಜನಿಕೆಯ ಮೂರ್ತಿರೂಪವಾಗಿದ್ದ ಮಾಜಿ ರಾಜ್ಯಸಭಾ ಸದಸ್ಯ ಎಚ್. ಹನುಮಂತಪ್ಪ (95) ಅವರು ವಯೋಸಹಜ ಅನಾರೋಗ್ಯದಿಂದ ಇಂದು (ಭಾನುವಾರ) ಮಧ್ಯಾಹ್ನ ನಿಧನರಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿದ್ದ ಹನುಮಂತಪ್ಪ ಅವರ ನಿಧನದಿಂದಾಗಿ ಜಿಲ್ಲೆ ಮಾತ್ರವಲ್ಲದೆ ಇಡೀ ರಾಜ್ಯ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ. ಸದ್ಯ ಬೆಂಗಳೂರಿನಲ್ಲಿರುವ ಅವರ ಪಾರ್ಥಿವ ಶರೀರವನ್ನು ಇಂದು ರಾತ್ರಿ ವೇಳೆಗೆ ಚಿತ್ರದುರ್ಗಕ್ಕೆ ತರಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ದಲಿತರು ಹಾಗೂ ವಂಚಿತರ ಧ್ವನಿಯಾಗಿದ್ದ ನಾಯಕ
ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ದಲಿತರು, ಹಿಂದುಳಿದವರು ಹಾಗೂ ಸಮಾಜದ ವಂಚಿತ ವರ್ಗಗಳ ಹಕ್ಕುಗಳಿಗಾಗಿ ಸದಾ ಧ್ವನಿಯಾಗಿದ್ದ ಹನುಮಂತಪ್ಪ ಅವರು, ರಾಷ್ಟ್ರ ಮಟ್ಟದಲ್ಲೂ ಛಾಪು ಮೂಡಿಸಿದ್ದರು.
ರಾಜ್ಯಸಭೆಯಲ್ಲಿ ಗಂಭೀರ ಧ್ವನಿ: 1982 ರಿಂದ 2000 ರವರೆಗೆ ಸತತ ಮೂರು ಬಾರಿ ರಾಜ್ಯಸಭೆಯನ್ನು ಪ್ರತಿನಿಧಿಸಿದ್ದ ಅವರು, ಸಂಸತ್ತಿನಲ್ಲಿ ನಡೆಸುತ್ತಿದ್ದ ವಿಚಾರಪೂರ್ಣ ಮತ್ತು ಗಂಭೀರ ಭಾಷಣಗಳ ಮೂಲಕ ಇಡೀ ದೇಶದ ಗಮನ ಸೆಳೆದಿದ್ದರು.
ರಾಷ್ಟ್ರಪತಿ ರೇಸ್ನಲ್ಲಿದ್ದ ಹೆಸರು: ಇವರ ರಾಜಕೀಯ ಪ್ರಭಾವ, ಅನುಭವ ಮತ್ತು ಸ್ವಚ್ಛ ಹಸ್ತದ ಆಡಳಿತ ಎಷ್ಟರಮಟ್ಟಿಗಿತ್ತೆಂದರೆ, ಒಂದು ಹಂತದಲ್ಲಿ ದೇಶದ ಅತ್ಯುನ್ನತ ಹುದ್ದೆಯಾದ 'ರಾಷ್ಟ್ರಪತಿ' ರೇಸ್ನಲ್ಲೂ ಇವರ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿತ್ತು.
ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ
ಸಕ್ರಿಯ ರಾಜಕಾರಣದಿಂದ ದೂರ ಸರಿದ ಬಳಿಕವೂ ಹನುಮಂತಪ್ಪ ಅವರು ಸಮಾಜಮುಖಿ ಕೆಲಸಗಳನ್ನು ನಿಲ್ಲಿಸಿರಲಿಲ್ಲ. 'ಎಸ್. ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್' ಅಧ್ಯಕ್ಷರಾಗಿ, ಚಿತ್ರದುರ್ಗದ ಸರಸ್ವತಿ ವಿದ್ಯಾ ಸಂಸ್ಥೆ ಮತ್ತು ಸರಸ್ವತಿ ಕಾನೂನು ಕಾಲೇಜಿನ ಅಧ್ಯಕ್ಷರಾಗಿ ಕೊನೆಯ ಉಸಿರಿರುವವರೆಗೂ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸಿದ್ದರು. ಹಿರಿಯ ನಾಯಕನ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ತೀವ್ರ ಶೋಕ ವ್ಯಕ್ತವಾಗಿದ್ದು, ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಇಂದು ಸಂಜೆ ಅಂತ್ಯಕ್ರಿಯೆ
ಮೃತರ ಪುತ್ರ ಹಾಗೂ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಿ.ಎಚ್. ಮೋಹನ್ ಅವರು ನೀಡಿರುವ ಮಾಹಿತಿ ಪ್ರಕಾರ, ಹನುಮಂತಪ್ಪ ಅವರ ಅಂತ್ಯಕ್ರಿಯೆಯು ನಾಳೆ (ಸೋಮವಾರ) ಸಂಜೆ 4:00 ಗಂಟೆಗೆ ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ ಮುಕ್ತಿಧಾಮದಲ್ಲಿ ನೆರವೇರಲಿದೆ.




