ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಕಾಂಗ್ರೆಸ್ ಸರ್ಕಾರವು ತನ್ನ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಾದ ‘ಗೃಹಲಕ್ಷ್ಮಿ’ ಮತ್ತು ‘ಗೃಹಜ್ಯೋತಿ’ ಸೇರಿದಂತೆ ವಿವಿಧ ಭಾಗ್ಯಗಳಿಗೆ ಕತ್ತರಿ ಹಾಕಲು ಮುಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ಭರವಸೆಗಳ ಮಹಾಪೂರ ಹರಿಸಿದ್ದ ಕಾಂಗ್ರೆಸ್, ಈಗ ಫಲಾನುಭವಿಗಳನ್ನು ಕೈಬಿಡಲು ಕುಂಟು ನೆಪಗಳನ್ನು ಹುಡುಕುತ್ತಿದೆ ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
"ಎಲ್ಲರಿಗೂ ಫ್ರೀ" ಎಂದಿದ್ದ ಸರ್ಕಾರ ಈಗ ವಂಚಿಸುತ್ತಿದೆ:
"ನನ್ನ ಹೆಂಡತಿಗೂ ಫ್ರೀ, ಕಾಕಾ ಪಾಟೀಲ್ ಗೂ ಫ್ರೀ, ಮಹದೇವಪ್ಪ ನಿನಗೂ ಫ್ರೀ" ಎಂದು ಘೋಷಿಸುವ ಮೂಲಕ ಆರ್ಥಿಕವಾಗಿ ಸಬಲರಾಗಿರುವವರಿಗೂ ಫ್ರೀ... ಫ್ರೀ... ಎಂದು ಡಂಗೂರ ಸಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆದರೆ ಈಗ ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಕತ್ತರಿ ಹಾಕಲು ಹೊರಟಿದೆ.
ಪರಿಷ್ಕರಣೆಯ ಹೆಸರಿನಲ್ಲಿ ವಂಚನೆ:
‘ಕಳ್ಳನಿಗೊಂದು ಪಿಳ್ಳೆ ನೆವ’ ಎಂಬಂತೆ ಜಿಎಸ್‌ಟಿ ಮತ್ತು ಆದಾಯ ತೆರಿಗೆ ಪಾವತಿದಾರರ ಹೆಸರನ್ನು ಮುಂದಿಟ್ಟುಕೊಂಡು, ಅರ್ಹ ಫಲಾನುಭವಿಗಳಿಗೆ ಅನರ್ಹತೆಯ ಪಟ್ಟ ಕಟ್ಟಲಾಗುತ್ತಿದೆ. ಪರಿಷ್ಕರಣೆಯ ನೆಪದಲ್ಲಿ ಜನರನ್ನು ವಂಚಿಸಿ, ಉಚಿತ ಭಾಗ್ಯ ಯೋಜನೆಗಳಿಗೆ ತಿಲಾಂಜಲಿ ನೀಡಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.
ಬರಿದಾದ ಖಜಾನೆ – ಸಾಮಾನ್ಯರ ಮೇಲೆ ತೆರಿಗೆ ಭಾರ:
ರಾಜ್ಯ ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ. ಇದನ್ನು ಮುಚ್ಚಿಹಾಕಲು ಸರ್ಕಾರ ಎಲ್ಲ ಮೂಲಗಳಿಂದಲೂ ಜನರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸುತ್ತಿದೆ.ತೆರಿಗೆ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ಮುದ್ರಾಂಕ ಶುಲ್ಕಗಳನ್ನು ಅಡ್ಡಾದಿಡ್ಡಿಯಾಗಿ ಹೆಚ್ಚಿಸಲಾಗಿದೆ. ಶ್ರೀಸಾಮಾನ್ಯರ ಬದುಕನ್ನು ಹಿಂಡಿ ಹಿಪ್ಪೆ ಮಾಡಲಾಗುತ್ತಿದೆ.
ಬೀದಿಗಿಳಿದು ಹೋರಾಡುವ ಎಚ್ಚರಿಕೆ:
ತನ್ನ ಆಡಳಿತ ವೈಫಲ್ಯದಿಂದ ಖಜಾನೆ ಬರಿದಾಗಿರುವುದನ್ನು ಒಪ್ಪಿಕೊಳ್ಳದ ಸರ್ಕಾರ, ಯೋಜನೆಗಳನ್ನು ಹಳ್ಳ ಹಿಡಿಸಲು ಕುಂಟು ನೆಪಗಳನ್ನು ಹುಡುಕುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಒಂದು ವೇಳೆ ಸರ್ಕಾರ ಫಲಾನುಭವಿಗಳಿಗೆ ಅನ್ಯಾಯ ಮಾಡಿ ಯೋಜನೆಗಳನ್ನು ನಿಲ್ಲಿಸಲು ಮುಂದಾದರೆ, ಜನಾಕ್ರೋಶವನ್ನು ಪ್ರತಿನಿಧಿಸಿ ಬಿಜೆಪಿ ರಾಜ್ಯಾದ್ಯಂತ ಬೀದಿಗಿಳಿದು ತೀವ್ರ ಹೋರಾಟ ನಡೆಸಲಿದೆ ಎಂದು ಬಿ.ವೈ. ವಿಜಯೇಂದ್ರ ಎಚ್ಚರಿಸಿದ್ದಾರೆ.



