ಹೆಚ್.ಸಿ ಗಿರೀಶ್, ಹರಿಯಬ್ಬೆ.
ಎಂ.ಎಲ್ ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಧರ್ಮಪುರ ಹೋಬಳಿಯ ಕಟ್ಟೆಗಳಿಗೆ ಏತ ನೀರಾವರಿ ಯೋಜನೆಯಡಿ ವೇದಾವತಿ ನದಿಯಿಂದ ರೈಸಿಂಗ್ ಮೇನ್ ಪೈಪ್‌ಲೈನ್ ಮೂಲಕ ಧರ್ಮಪುರ, ಗೂಳ್ಯ, ಮುಂಗಸವಳ್ಳಿ, ಸೂಗೂರು, ಈಶ್ವರಗೆರೆ, ಅಬ್ಬಿನಹೊಳೆ, ಶ್ರಾವಣಗೆರೆ, ಹರಿಯಬ್ಬೆ ಅಜ್ಜಿಕಟ್ಟೆ ಮತ್ತು ಧರ್ಮಪುರ ಸೇರಿದಂತೆ ಒಟ್ಟು 8 ಕೆರೆಗಳಿಗೆ ನೀರು ಹರಿಸುವುದು ಸಣ್ಣ ನೀರಾವರಿ ಇಲಾಖೆಗೆ ಬಹುದೊಡ್ಡ ಸವಾಲ್ ಆಗಿ ಪರಿಣಮಿಸಿದೆ.
8 ಕೆರೆಗಳಿಗೆ ನೀರು ಹಂಚಿಕೆ ಆಗಿಲ್ಲದಿರುವುದು, ವಿದ್ಯುತ್ ಕಣ್ಣಾಮುಚ್ಚಾಲೆ, ಪೈಪ್‌ಲೈನ್‌ವಾಲ್ವ್‌ಗಳನ್ನು ಅನಧಿಕೃತವಾಗಿ ಕಿಡಿಗೇಡಿಗಳು ತಿರುಗಿಸಿ ತಮ್ಮ ಕೆರೆ, ಕಟ್ಟೆಗಳಿಗೆ ಭರ್ತಿ ಮಾಡಿಕೊಳ್ಳುತ್ತಿರುವುದು ಹಾಗೂ ಹೊಸಳ್ಳಿ ಬ್ಯಾರೇಜ್ ನಲ್ಲಿ ನೀರಿನ ಶೇಖರಣೆ ಸಮಸ್ಯೆಯಿಂದಾಗಿ ಸಕಾಲದಲ್ಲಿ 8 ಕೆರೆ, ಕಟ್ಟೆಗಳಿಗೆ ನೀರು ಭರ್ತಿ ಮಾಡುವುದು ಅಸಾಧ್ಯದ ಕಾರ್ಯವಾಗಿದೆ.
60 ದಿನಗಳಲ್ಲಿ ಕೆರೆ ತುಂಬಿಸುವ ಗುರಿ: ಧರ್ಮಪುರ ಏತ ನೀರಾವರಿ ಯೋಜನೆಯಡಿ ಹೊಸಹಳ್ಳಿ ಬಳಿ ವೇದಾವತಿ ನದಿಯಿಂದ ನೀರೆತ್ತಿ, ಧರ್ಮಪುರ, ಸೂಗೂರು, ಮುಂಗಸವಳ್ಳಿ, ಗೂಳ್ಯ, ಮುಂಗಸವಳ್ಳಿ-೨, ಈಶ್ವರಗೆರೆ, ಶ್ರವಣಗೆರೆ ಹಾಗೂ ಅಬ್ಬಿನಹೊಳೆ ಸೇರಿದಂತೆ ಒಟ್ಟು 8 ಪ್ರಮುಖ ಕೆರೆಗಳಿಗೆ 60 ದಿನಗಳಲ್ಲಿ ದಿನಕ್ಕೆ 22 ಗಂಟೆಗಳ ಕಾಲ ನೀರು ಹರಿಸುವ ಗುರಿ ಹೊಂದಲಾಗಿದ್ದರೂ ಬೆಸ್ಕಾಂ ಕಂಪನಿಯವರು ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದೇ ಪದೇ ಪದೆ ವಿದ್ಯುತ್ ಪೂರೈಕೆ ಅಡಚಣೆ ಮಾಡುತ್ತಿರುವುದು, ತೀವ್ರತರದ ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ಸಮಸ್ಯೆ ಉಲ್ಬಣಗೊಂಡಿದೆ.
ನೀರು ಹಂಚಿಕೆ ಸಮಸ್ಯೆ: ಹಿರಿಯೂರು ತಾಲೂಕಿನ ಹೊಸಳ್ಳಿ ಸಮೀಪ ವೇದಾವತಿ ನದಿಗೆ ಅಡ್ಡಲಾಗಿ 90 ಕೋಟಿ ರೂ.ಗಳ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ.
ಚಳ್ಳಕೆರೆ ತಾಲ್ಲೂಕಿನ ವೇದಾವತಿ ನದಿ ಪಾತ್ರಕ್ಕೆ ವಾಣಿವಿಲಾಸ ಸಾಗರ ಜಲಾಶಯದಿಂದ 0.25 ಟಿ.ಎಂ.ಸಿ ನೀರನ್ನು ಮೀಸಲಿಟ್ಟು ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಹರಿಯುವ ವೇದಾವತಿ ನದಿ ಪಾತ್ರದ ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಸಲು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶ ಹೊಂದಿಲಾಗಿದೆ.
ಈ ಮಹತ್ವದ ಕಾರ್ಯಕ್ಕಾಗಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಕೊನೆಯ ಚೆಕ್ ಡ್ಯಾಂ / ಬ್ರಿಡ್ಜ್ ಕಂ ಬ್ಯಾರೇಜ್‌ವರೆಗೆ ನೀರು ಸಂಗ್ರಹವಾಗುವಂತೆ ವೇದಾವತಿ ನದಿ ಪಾತ್ರದಲ್ಲಿ ನೀರನ್ನು ಹರಿಸಲು ಅಧಿಕೃತ ಆದೇಶ ಹೊರಡಿಸಿದ್ದಾರೆ.



ಆದರೆ ಧರ್ಮಪುರ ಹೋಬಳಿಯ 8 ಕೆರೆಗಳಿಗೆ ನೀರು ಹರಿಸಬೇಕಾದರೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಹೊಸಳ್ಳಿ ಬ್ಯಾರೇಜ್ ಗೆ ವಿವಿ ಸಾಗರದಿಂದ 0.30 ಟಿಎಂಸಿ ನೀರು ಹಂಚಿಕೆ ಮಾಡಿ ಇದೇ ರೀತಿಯ ಆದೇಶ ಹೊರಡಿಸಿದರೆ ಮಾತ್ರ ಧರ್ಮಪುರ ಹೋಬಳಿಯ 8 ಕೆರೆಗಳಿಗೆ ನೀರು ಹರಿಸಲು ಸಾಧ್ಯ.
ಕಿಡಿಗೇಡಿಗಳ ಕೃತ್ಯ:
ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಯ ಕೆರೆಗಳಿಗೆ ನೀರು ಹಂಚಿಕೆ ಮಾಡಲಿಲ್ಲವಾದರೂ ವಾಣಿ ವಿಲಾಸ ಸಾಗರದ ಅಚ್ಚುಕಟ್ಟು ರೈತರ ಬೆಳೆಗಳಿಗೆ ನೀರು ಹರಿಸುವ ಸಂದರ್ಭದಲ್ಲಿ ರೈತರ ಜಮೀನುಗಳಿಂದ ಸೋರಿಕೆ ಆಗುವ ನೀರು ಹೊಸಳ್ಳಿ ಬ್ಯಾರೇಜ್ ಗೆ ಶೇಖರಣೆ ಆಗಲಿದೆ. ಆ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಶ್ರಮವಹಿಸಿ ಲಭ್ಯ ಇರುವ ನೀರು ಸದ್ಬಳಕೆ ಮಾಡಿಕೊಳ್ಳಲು ವೇದಾವತಿ ನದಿಯಿಂದ ವಿವಿಧ ಕೆರೆಗಳಿಗೆ ನೀರು ಹರಿಸುತ್ತಾರೆ. ಈ ವೇಳೆ ಕಿಡಿಗೇಡಿಗಳು ಮಾರ್ಗ ಮಧ್ಯದ ಕೆರೆಗಳ ನೀರು ಭರ್ತಿ ಮಾಡಿಕೊಳ್ಳಲು ಪೈಪ್‌ಲೈನ್‌ವಾಲ್ವ್‌ಗಳನ್ನು ಅನಧಿಕೃತವಾಗಿ ತಮಗಿಷ್ಟ ಬಂದಂತೆ ಅನಧಿಕೃತವಾಗಿ ತಿರುಗಿಸಿ ನೀರು ಮುಂದೆ ಹೋಗದಂತೆ ತೊಂದರೆ ನೀಡುತ್ತಿದ್ದಾರೆ. ಇಂಥಹ ಕಿಡಿಕೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅಬ್ಬಿನಹೊಳೆ ಪೊಲೀಸರಿಗೆ ದೂರು ನೀಡಿ ಕ್ರಣ ವಹಿಸುವಂತೆ ಕೋರಿದೆ.
ಮುಖ್ಯವಾಗಿ ಮುಂಗಸವಳ್ಳಿ ಮತ್ತು ಗೂಳ್ಯ ಕೆರೆಗಳ ಹತ್ತಿರವಿರುವ ವಾಲ್ವ್‌ಗಳನ್ನು ಸ್ಥಳೀಯರು ಪದೇ ಪದೇ ಅನಧಿಕೃತವಾಗಿ ತಿರುಗಿಸುತ್ತಿರುವ ಸ್ಥಳೀಯರಿಗೆ ಹಲವು ಬಾರಿ ಸೂಚನೆ ಹಾಗೂ ಎಚ್ಚರಿಕೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಇಂತಹ ಅನಧಿಕೃತ ಕೃತ್ಯ ಎಸಗುತ್ತಿರುವವರನ್ನು ಶೀಘ್ರವೇ ಪತ್ತೆ ಹಚ್ಚಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಇಲಾಖೆಯ ಅಧಿಕಾರಿಗಳು ಪೊಲೀಸರಲ್ಲಿ ಕೋರಿದ್ದಾರೆ.
ಧರ್ಮಪುರ ಏತ ನೀರಾವರಿ ಯೋಜನೆಗೆ ವಿದ್ಯುತ್ ಕೊರತೆ:
ಧರ್ಮಪುರ ಹೋಬಳಿಯ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ವೇದಾವತಿ ನದಿಯಿಂದ ಧರ್ಮಪುರ ಮತ್ತು ಸುತ್ತಮುತ್ತಲಿನ ಕೆರೆಗಳಿಗೆ ನೀರು ತುಂಬಿಸುವ 'ಧರ್ಮಪುರ ಏತ ನೀರಾವರಿ ಯೋಜನೆ'ಗೆ ಸಮರ್ಪಕ ವಿದ್ಯುತ್ ಸರಬರಾಜಾಗದೆ ಕೆರೆಗಳಿಗೆ ನೀರು ಭರ್ತಿ ಮಾಡುವ ಯೋಜನೆಗೆ ಅಡಚಣೆಯಾಗಿದೆ. ದಿನಕ್ಕೆ 22 ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಸುವಂತೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಅವರು ಹಿರಿಯೂರಿನ ಬೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗಕ್ಕೆ ತುರ್ತು ಪತ್ರ ಬರೆದು ಮನವಿ ಮಾಡಿದ್ದರೂ ಅಧಿಕಾರಿಗಳು ಗಮನ ಹರಿಸಿಲ್ಲ.
ರೈತರ ಆಕ್ರೋಶ ಮತ್ತು ಪ್ರಜಾ ಸೇವಾ ಸಭೆ:
ಚಳ್ಳಕೆರೆ ತಾಲೂಕಿನ ಕಲಮರನಹಳ್ಳಿ 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಿಂದ ಪೂರೈಕೆಯಾಗುತ್ತಿರುವ ವಿದ್ಯುತ್‌ನಲ್ಲಿ ಆಗಾಗ ಅಡಚಣೆ ಉಂಟಾಗುತ್ತಿರುವುದರಿಂದ ಕೆರೆಗಳಿಗೆ ಸರಿಯಾಗಿ ನೀರು ತಲುಪುತ್ತಿಲ್ಲ. ಇದರಿಂದ ಆಕ್ರೋಶಗೊಂಡ ಸ್ಥಳೀಯ ರೈತರು, ಸೆ.12 ರಂದು ಧರ್ಮಪುರದಲ್ಲಿ ಜರುಗಿದ 'ಪ್ರಜಾ ಸೇವಾ ಸಭೆ'ಯಲ್ಲಿ ಚಿತ್ರದುರ್ಗದ ಸಹಾಯಕ ಆಯುಕ್ತರು ಹಾಗೂ ಹಿರಿಯೂರು ತಹಶೀಲ್ದಾರರ ಸಮ್ಮುಖದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ ತಕ್ಷಣವೇ ವಿದ್ಯುತ್ ಲೋಪದೋಷ ಸರಿಪಡಿಸಿ ನೀರು ಹರಿಸಬೇಕೆಂದು ರೈತರು ಒತ್ತಾಯಿಸಿದ್ದರು. ಈ ಕಾರ್ಯ ಕೂಡ ಆಗಿಲ್ಲ.
ಕೂಡಲೇ ನಿರಂತರ 22 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಿ ಕೆರೆಗಳಿಗೆ ನೀರು ಹರಿಸಲು ಅನುಕೂಲ ಮಾಡಿಕೊಡಬೇಕಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಸಮಸ್ಯೆ ಹೇಳಿಕೊಳ್ಳಲು ಹಿರಿಯೂರು ಜನರಿಗೆ ಶಾಸಕರಿಲ್ಲ. ಜೊತೆಗೆ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡುತ್ತಿದ್ದು ಕೂಡಲೇ ಅವರು ಹೊಸಳ್ಳಿ ಬ್ಯಾರೇಜ್ ಗೆ ನೀರು ಭರ್ತಿ ಮಾಡಿ ಧರ್ಮಪುರ ಹೋಬಳಿಯ 8 ಕೆರೆಗಳಿಗೆ ನೀರು ಭರ್ತಿ ಮಾಡಿಸಬೇಕು.
ಈ ಕಾರ್ಯ ಸುಗಮವಾಗಿ ನಡೆಯಬೇಕಾದರೆ ನಿರಂತರ 22 ಗಂಟೆಗಳ ವಿದ್ಯುತ್ ಪೂರೈಕೆ ಆಗಬೇಕು. ಕಿಡಿಕೇಡಿಗಳ ಪತ್ತೆ ಹಚ್ಚಿ ಕ್ರಮ ಜರುಗಿಸಲು ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡಿ ಏತ ನೀರಾವರಿ ಯೋಜನೆಯ ಸಮಸ್ಯೆ ನಿವಾರಣೆ ಮಾಡುವಂತೆ ಧರ್ಮಪುರ ಭಾಗದ ರೈತರು ಆಗ್ರಹ ಮಾಡಿದ್ದಾರೆ.




