ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಹಿಳೆಯರ ಓಟು ಬೇಕು, ಆದರೆ ಅವರಿಗೆ ಪ್ರಾತಿನಿಧ್ಯ ನೀಡಬಾರದು ಎನ್ನುವುದೇ ಕಾಂಗ್ರೆಸ್ ಪಕ್ಷದ ನೈಜ ನಿಲುವು ಎಂದು ಬಿಜೆಪಿ ನಾಯಕ ಸಿ.ಟಿ. ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಒಬ್ಬರೇ ಒಬ್ಬರು ಮಹಿಳೆಗೆ ಸಚಿವ ಸ್ಥಾನ ನೀಡದಿರುವುದು ಇಡೀ ರಾಜ್ಯದ ಮಹಿಳೆಯರಿಗೆ ಎಸಗಿದ ಅನ್ಯಾಯ ಮತ್ತು ಅವಮಾನ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಕ್ಕಾಗಿ ಓಟು ಕೇಳುವಾಗ ಮಾತ್ರ ಕಾಂಗ್ರೆಸ್‌ಗೆ ಮಹಿಳೆಯರು 'ಗೃಹಲಕ್ಷ್ಮಿ' ಮತ್ತು ತಾಯಂದಿರಾಗಿ ನೆನಪಾಗುತ್ತಾರೆ. ಆದರೆ, ಅಧಿಕಾರ ಬಂದ ಬಳಿಕ ಮಹಿಳೆಯರ ಮತಗಳಿಂದಲೇ ತಾವು ಗೆದ್ದಿದ್ದೇವೆ ಎಂಬುದನ್ನು ಮರೆತುಬಿಡುತ್ತಾರೆ. ಸಮಾಜದಲ್ಲಿ ಶೇ. 50 ರಷ್ಟು ಪಾಲು ಹೊಂದಿರುವ ಮಹಿಳೆಯರನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಕಾಂಗ್ರೆಸ್, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವುದು ತೀರಾ ಹಾಸ್ಯಾಸ್ಪದ ಎಂದು ಕಿಡಿಕಾರಿದ್ದಾರೆ.
ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ಕಲ್ಪಿಸುವ 'ನಾರಿಶಕ್ತಿ ವಂದನಾ' ಮಸೂದೆಯನ್ನು ವಿರೋಧಿಸಿದ್ದ ಕಾಂಗ್ರೆಸ್‌ನಿಂದ ಮಹಿಳಾ ಪ್ರಾತಿನಿಧ್ಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಸಂಪುಟದಲ್ಲಿ ಸ್ಥಾನ ನೀಡದೆ ಇರುವುದರ ಮೂಲಕ ಕಾಂಗ್ರೆಸ್ ತನ್ನ ಮಹಿಳಾವಿರೋಧಿ ನೈಜ ಬಣ್ಣವನ್ನು ಮತ್ತೊಮ್ಮೆ ಪ್ರದರ್ಶಿಸಿದೆ ಎಂದು ಸಿ.ಟಿ. ರವಿ ವರದಿ ಮಾಡಿದ್ದಾರೆ.



