ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ಸಹಯೋಗದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ, ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ ಮತ್ತು ಡಾ.ಡಿ.ಆರ್.ನಾಗರಾಜ್ ಅವರ ಉರಿಯ ಚಮ್ಮಾಳಿಗೆ ಕುರಿತು ಸಂವಾದ, ಡಾ.ಡಿ.ಆರ್.ನಾಗರಾಜ್ ಕೃತಿಗಳನ್ನು ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಗರದ ಕನ್ನಡ ಜಾಗೃತ ಭವನದಲ್ಲಿ ನಡೆಯಿತು.
ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಿಜ್ಞಾನ ಸಾಹಿತಿ ಡಾ.ಎ.ಓ.ಆವಲಮೂರ್ತಿ, ಡಿ.ಆರ್.ನಾಗರಾಜ್ ಅವರ ಉರಿಯ ಚಮ್ಮಾಳಿಗೆ’ಯಲ್ಲಿ ಗಾಂಧಿ–ಅಂಬೇಡ್ಕರ್ ಮುಖಾಮುಖಿ ಎಂದರೆ ಅಸ್ಪೃಶ್ಯತೆಯ ನಿರ್ಮೂಲನೆ ಮತ್ತು ಜಾತಿ ನಿರ್ಮೂಲನೆಯ ನಡುವಿನ ವ್ಯತ್ಯಾಸ, ನೈತಿಕ ಸುಧಾರಣೆ ಮತ್ತು ಹಕ್ಕು–ಆಧಾರಿತ ಸಾಮಾಜಿಕ ಪರಿವರ್ತನೆಯ ನಡುವಿನ ವೈಚಾರಿಕ ಸಂಘರ್ಷದ ಸಂವಾದ ನಡೆದಿದೆ ಎಂದರು.
ಪ್ರಾಧ್ಯಾಪಕ ಡಾ.ಪ್ರಕಾಶ್ ಮಂಟೇದ ಮಾತನಾಡಿ, ಗಾಂಧಿ ಮತ್ತು ಅಂಬೇಡ್ಕರ್ ಅವರ ಚಿಂತನೆಗಳನ್ನು ಅರ್ಥ ಮಾಡಿಕೊಂಡಾಗ ಮಾತ್ರ ಭಾರತೀಯ ಸಮಾಜದ ಜಾತಿ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳಲು ಸಹಕಾರಿ ಆಗುತ್ತದೆ. ಇಬ್ಬರ ನಡುವಿನ ಎರಡೂ ಚಿಂತನೆಗಳ ಸಂವಾದ, ಸಂಘರ್ಷವನ್ನು ಕಾಲ ಕಾಲಕ್ಕೆ ಆಗುವ ಬದಲಾವಣೆಯ ಜ್ಞಾನದ ವಿವೇಕವನ್ನು ಸಮನ್ವಯಿಸಿಕೊಳ್ಳುವ ಮೂಲಕ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಕನ್ನಡ ಜಾಗೃತ ಪರಿಷತ್ತು ಅಧ್ಯಕ್ಷ ಕೆ.ವೆಂಕಟೇಶ್ ಮಾತನಾಡಿ, ಗಾಂಧೀಜಿಯ ಮಾರ್ಗವು ಸಮಾಜದ ನೈತಿಕ ಪರಿವರ್ತನೆ ಮತ್ತು ಸಹಬಾಳ್ವೆಯ ಕಡೆಗೆ ಸಾಗುತ್ತದೆ. ಅಂಬೇಡ್ಕರರ ಮಾರ್ಗವು ಜಾತಿಯ ಅಸಮಾನತೆಯ ಮೂಲವನ್ನು ಪ್ರಶ್ನಿಸಿ, ಸಮಾನ ಹಕ್ಕು ಮತ್ತು ಸ್ವಾಭಿಮಾನದ ಆಧಾರದ ಮೇಲೆ ಹೊಸ ಸಾಮಾಜಿಕ ಸಂಬಂಧಗಳನ್ನು ನಿರ್ಮಿಸುವ ಕಡೆಗೆ ಸಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡಪರ ಹೋರಾಟಗಾರರಾದ ಸಂಜೀವ್ ನಾಯಕ್, ಗುರುರಾಜಪ್ಪ, ಡಿ.ವೆಂಕಟೇಶ್, ಗಂಗಾ ನರ್ಸಿಂಗ್ ಹೋಂ ಆಸ್ಪತ್ರೆಯ ವೈದ್ಯ ಡಾ.ರಮೇಶ್ ಗೌಡ, ಪತ್ರಕರ್ತರಾದ ಡಿ.ಶ್ರೀಕಾಂತ್, ಗಂಗರಾಜು ಶಿರವಾರ, ಪ್ರಾಂಶುಪಾಲ ಎಂ.ಸಿ.ಮಂಜುನಾಥ್, ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಗಳಾದ ಪಿ.ಗೋವಿಂದರಾಜು, ಪ್ರಮೀಳಾ ಮಹಾದೇವ್, ಎ.ಜಯರಾಮ್, ಕಮಲನಾಥ್, ಜಿ.ಸುರೇಶ್, ಕೋದಂಡರಾಮ್, ಅಣ್ಣಯ್ಯ, ನಾಗರತ್ನಮ್ಮ, ಕನ್ನಡ ಜಾಗೃತ ಪರಿಷತ್ತು ಪದಾಧಿಕಾರಿಗಳಾದ ಡಿ.ಪಿ.ಆಂಜನೇಯ, ಬಿ.ಜಿ.ಅಮರನಾಥ್, ಆನಂದ್, ಚಂದ್ರಪ್ಪ, ಸೂರ್ಯನಾರಾಯಣ್, ಷಫೀರ್ ಮುಂತಾದವರು ಭಾಗವಹಿಸಿದ್ದರು.




