ಚಂದ್ರವಳ್ಳಿ ನ್ಯೂಸ್, ಮೈಸೂರು:
"ಬಿ. ನಾಗೇಂದ್ರ ಅವರು ಪಕ್ಷದ ಶಿಸ್ತಿನ ಸಿಪಾಯಿ. ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಮುಜುಗರ ಆಗಬಾರದು ಎಂಬ ಒಂದೇ ಕಾರಣಕ್ಕೆ ಅವರು ಸ್ವ-ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ.
ಆದರೆ ನಿಜ ಹೇಳಬೇಕೆಂದರೆ, ಅವರು ರಾಜೀನಾಮೆ ನೀಡುವ ಯಾವುದೇ ಅವಶ್ಯಕತೆ ಇರಲಿಲ್ಲ" ಎಂದು ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ವಿರೋಧ ಪಕ್ಷ ಬಿಜೆಪಿಯ ರಾಜಕೀಯವನ್ನು ತೀವ್ರವಾಗಿ ತಖಂಡಿಸಿದರು.
ಇಡಿ, ಸಿಬಿಐನಲ್ಲೂ ನಾಗೇಂದ್ರ ಹೆಸರಿಲ್ಲ:ಪ್ರಕರಣದ ಕುರಿತು ವಿವರಣೆ ನೀಡಿದ ಸಚಿವರು, "ಈ ವಿಚಾರದಲ್ಲಿ ಬಿಜೆಪಿ ನಾಯಕರು ಅನಗತ್ಯವಾಗಿ ರಾಜಕೀಯ ಮಾಡುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹಾಗೂ ಇಡಿ ನಡೆಸುತ್ತಿರುವ ತನಿಖೆಯಲ್ಲಾಗಲಿ ಅಥವಾ ಎಫ್‌ಐಆರ್‌ನಲ್ಲಾಗಲಿ ನಾಗೇಂದ್ರ ಅವರ ಹೆಸರು ಎಲ್ಲೂ ಉಲ್ಲೇಖವಾಗಿಲ್ಲ. ಅವರು ಹಣ ಪಡೆದಿದ್ದಾರೆ ಎನ್ನಲು ಯಾವುದೇ ಸಾಕ್ಷ್ಯಾಧಾರಗಳೂ ಇಲ್ಲ. ನಾನು ಗೃಹ ಸಚಿವನಾಗಿದ್ದಾಗ ಶೇ. 79ರಷ್ಟು ಹಣವನ್ನು ಈಗಾಗಲೇ ರಿಕವರಿ ಮಾಡಲಾಗಿತ್ತು. ಇನ್ನುಳಿದ 5 ಕೋಟಿ ರೂಪಾಯಿ ರಿಕವರಿ ಪ್ರಕ್ರಿಯೆ ನಡೆಯುತ್ತಿದೆ.
ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ನಾಗೇಂದ್ರ ಅವರ ಹೆಸರಿಲ್ಲ. ಮುಂದಿನ ದಿನಗಳಲ್ಲಿ ಪ್ರಕರಣದ ನೈಜ ವಸ್ತುಸ್ಥಿತಿಯನ್ನು ನಾವು ಜನರ ಮುಂದಿಡಲಿದ್ದೇವೆ. ಬಿಜೆಪಿಯವರಿಗೆ ನಿಜಕ್ಕೂ ಆಸಕ್ತಿಯಿದ್ದರೆ ಸದನದಲ್ಲಿ ಪ್ರಶ್ನೆ ಕೇಳಬಹುದಿತ್ತು, ಆದರೆ ಅವರು ಕೇವಲ ರಾಜಕೀಯ ಮಾಡಲು ಸೀಮಿತರಾಗಿದ್ದಾರೆ" ಎಂದು ಕಿಡಿಕಾರಿದರು.
ಕುಮಾರಸ್ವಾಮಿ ಸಾಕ್ಷಿ ಸಮೇತ ಮಾತನಾಡಲಿ:
ಹೆಚ್.ಡಿ. ಕುಮಾರಸ್ವಾಮಿ ಅವರ ಆರೋಪಗಳಿಗೆ ತಿರುಗೇಟು ನೀಡಿದ ಪರಮೇಶ್ವರ್, "ಎಲ್ಲರ ಮೇಲೆಯೂ, ಪ್ರತಿಯೊಂದು ವಿಚಾರಕ್ಕೂ ಆಧಾರರಹಿತ ಅಪಾದನೆ ಮಾಡುವುದು ಕುಮಾರಸ್ವಾಮಿ ಅವರ ಕೆಲಸ. ಅವರ ಬಳಿ ಸೂಕ್ತ ದಾಖಲೆಗಳಿದ್ದರೆ ತನಿಖಾ ಸಂಸ್ಥೆಗಳಿಗೆ ಅಥವಾ ಕೋರ್ಟ್‌ಗೆ ನೀಡಲಿ. ಕಾನೂನಿನ ಚೌಕಟ್ಟಿನಲ್ಲಿ ಏನು ಬೇಕಾದರೂ ಮಾಡಲಿ. ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ – ನನಗೂ ಒಂದೇ, ಕುಮಾರಸ್ವಾಮಿ ಅವರಿಗೂ ಒಂದೇ, ಪ್ರಿಯಾಂಕ್ ಖರ್ಗೆ ಅವರಿಗೂ ಒಂದೇ" ಎಂದರು.
101 ತಾಲೂಕುಗಳು ಬರಪೀಡಿತ – ಕೇಂದ್ರದಿಂದ ಪರಿಹಾರ ನಿರೀಕ್ಷೆ:
ರಾಜ್ಯದ ಬರ ಪರಿಸ್ಥಿತಿಯ ಕುರಿತು ಮಾತನಾಡುತ್ತಾ, "ರಾಜ್ಯದ 101 ತಾಲೂಕುಗಳನ್ನು ಈಗಾಗಲೇ ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರವೇ ಬರ ಅಧ್ಯಯನ ನಡೆದಿದ್ದು, ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೇವೆ. ಕೇಂದ್ರದಿಂದ ಅಧ್ಯಯನ ತಂಡ ಬಂದು ಪರಿಶೀಲನೆ ನಡೆಸಿದ ಬಳಿಕ ಪರಿಹಾರದ ಹಣ ಬಿಡುಗಡೆಯಾಗಲಿದೆ.
ಪ್ರಸ್ತುತ ನಮಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಮಾಡುವುದೇ ಮೊದಲ ಆದ್ಯತೆಯಾಗಿದೆ. ಕಳೆದ ಬಾರಿ ನಾವು ಸುಪ್ರೀಂ ಕೋರ್ಟ್‌ಗೆ ಹೋಗಿ ಹೋರಾಟ ಮಾಡಿ 3,500 ಕೋಟಿ ರೂ. ಪರಿಹಾರ ತಂದಿದ್ದೆವು. ಈ ಬಾರಿಯೂ ಕೇಂದ್ರಕ್ಕೆ ಮನವಿ ಮಾಡಿದ್ದು, ಇಂತಹ ಸನ್ನಿವೇಶಗಳು ಮರುಕಳಿಸದಂತೆ ಶೀಘ್ರ ಹಣ ಬಿಡುಗಡೆ ಮಾಡಲು ಕೋರಲಾಗಿದೆ" ಎಂದರು.
ಇದೇ ವೇಳೆ ಕೆಐಡಿಬಿ ಭೂಸ್ವಾಧೀನ ವಿಚಾರಕ್ಕೆ ಪ್ರತಿಕ್ರಿಯಿಸಿ, "ಮೈಸೂರಿನಲ್ಲಿ ಹೆಚ್ಚಿನ ಕೈಗಾರಿಕೆಗಳು ಬರಬೇಕು ಎಂಬ ಉದ್ದೇಶದಿಂದ ನೋಟಿಫಿಕೇಶನ್ ನೀಡಿರಬಹುದು, ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಸಚಿವರು, ಕೈಗಾರಿಕಾ ಸಚಿವರು ಗಮನಹರಿಸಲಿದ್ದಾರೆ" ಎಂದರು.
ಹಾಗೆಯೇ "ಸಿದ್ದರಾಮಯ್ಯ ಅವರು ಸದನಕ್ಕೆ ಆಗಮಿಸಿದ್ದರು, ಪ್ರಸ್ತುತ ಎರಡು ತಿಂಗಳು ವಿಶ್ರಾಂತಿ ಪಡೆಯುತ್ತಿದ್ದು, ಶೀಘ್ರದಲ್ಲೇ ಮತ್ತೆ ಸಕ್ರಿಯರಾಗಲಿದ್ದಾರೆ" ಎಂದು ತಿಳಿಸಿದರು.




