ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರ ಇಂದು ಶಂಕುಸ್ಥಾಪನೆ ನೆರವೇರಿಸಿರುವ 1,139 ಕೋಟಿ ರೂಪಾಯಿ ವೆಚ್ಚದ ಹೆಬ್ಬಾಳ ಸುರಂಗ ರಸ್ತೆ ಯೋಜನೆಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
"ಮುಖ್ಯಮಂತ್ರಿಗಳೇ, ನೀವು ಶಂಕುಸ್ಥಾಪನೆ ಮಾಡಿಲ್ಲ; ಬದಲಿಗೆ ಬೆಂಗಳೂರಿನ ವೈಜ್ಞಾನಿಕ ನಗರಾಭಿವೃದ್ಧಿಯ ಸಮಾಧಿ ಕಲ್ಲನ್ನು ನೆಟ್ಟಿದ್ದೀರಿ" ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.
ರಾಜ್ಯ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯು ಅವೈಜ್ಞಾನಿಕವಾಗಿದ್ದು, ನಗರದ ಸಂಚಾರ ದಟ್ಟಣೆಯನ್ನು ಬಗೆಹರಿಸುವಲ್ಲಿ ಸಂಪೂರ್ಣ ವಿಫಲವಾಗಲಿದೆ ಎಂದು ಸಂಸದರು ಆಕ್ರೋಶ ಹೊರಹಾಕಿದ್ದಾರೆ.
ಮೊದಲ ದಿನವೇ ಟ್ರಾಫಿಕ್ ಜಾಮ್! ಸರ್ಕಾರದ ವರದಿಯಲ್ಲೇನಿದೆ?:
ಸರ್ಕಾರದ ಸ್ವಂತ ಯೋಜನಾ ವರದಿಯನ್ನೇ ಅಸ್ತ್ರವಾಗಿ ಬಳಸಿಕೊಂಡಿರುವ ತೇಜಸ್ವಿ ಸೂರ್ಯ, "ಈ ಸುರಂಗ ಮಾರ್ಗವು ಆರಂಭವಾದ ಮೊದಲ ದಿನದಿಂದಲೇ ವಾಹನ ದಟ್ಟಣೆಯಿಂದ ಸಂಪೂರ್ಣವಾಗಿ ತುಂಬಿರುತ್ತದೆ ಎಂದು ಡಿಪಿಆರ್‌ನಲ್ಲೇ ಒಪ್ಪಿಕೊಳ್ಳಲಾಗಿದೆ. ಐದೋ ಅಥವಾ ಹತ್ತೋ ವರ್ಷಗಳ ನಂತರ ಅಲ್ಲ, ಮೊದಲ ದಿನವೇ ಈ ಯೋಜನೆ ಟ್ರಾಫಿಕ್ ಜಾಮ್‌ನೊಂದಿಗೆ ಯಾನ ಆರಂಭಿಸುತ್ತದೆ ಎನ್ನುವುದಾದರೆ, ಇದರಿಂದ ಸಾರ್ವಜನಿಕರಿಗೆ ಏನು ಲಾಭ? ಇದು ಯಾರಿಗೆ ಉಪಯೋಗ?" ಎಂದು ಪ್ರಶ್ನಿಸಿದ್ದಾರೆ.
"ವಿಐಪಿಗಳಿಗೆ ರಸ್ತೆ, ಗುತ್ತಿಗೆದಾರರಿಗೆ ಲಾಭ, ಜನರಿಗೆ ಹೊರೆ!":
ಈ ಯೋಜನೆಯು ಕೇವಲ ಸದಾಶಿವನಗರದ ವಿಐಪಿಗಳು, ಮುಖ್ಯಮಂತ್ರಿಗಳು ಹಾಗೂ ವಿಮಾನ ನಿಲ್ದಾಣಕ್ಕೆ ಹೋಗುವ ನಗರದ ಗಣ್ಯರ ಹಿತಾಸಕ್ತಿ ಕಾಯಲು ರೂಪಿಸಿದಂತಿದೆ ಎಂದು ಆರೋಪಿಸಿದ ಸೂರ್ಯ, ಇದರ ವೆಚ್ಚವನ್ನು ಮಾತ್ರ ಬೆಂಗಳೂರಿನ ಸಾಮಾನ್ಯ ತೆರಿಗೆದಾರರು ಭರಿಸಬೇಕಾಗಿದೆ ಎಂದಿದ್ದಾರೆ. "ಇದರ ನಿಜವಾದ ಫಲಾನುಭವಿಗಳು ಗುತ್ತಿಗೆದಾರರು ಮಾತ್ರ. ಕಾಂಗ್ರೆಸ್ ನಿಧಿಗೆ ಭಾರಿ ಪ್ರಮಾಣದ ಕಿಕ್‌ಬ್ಯಾಕ್ ನೀಡಲು ಈ ಯೋಜನೆ ರೂಪಿಸಲಾಗಿದೆ ಎಂಬ ಭಾವನೆ ಸಾರ್ವಜನಿಕರಲ್ಲಿದೆ" ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಸಚಿವ ಕೃಷ್ಣ ಬೈರೇಗೌಡರ ಹಳೇ ಹೇಳಿಕೆ ನೆನಪಿಸಿದ ಸಂಸದ:
"ಸಣ್ಣ ಫ್ಲೈಓವರ್‌ಗಳಿಂದ ಸಂಚಾರ ದಟ್ಟಣೆ ನಿವಾರಿಸಲು ಸಾಧ್ಯವಿಲ್ಲ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರೇ ಪದೇ ಪದೇ ವಾದಿಸುತ್ತಿದ್ದರು" ಎಂದು ನೆನಪಿಸಿದ ಸೂರ್ಯ, ಈಗ ಸರ್ಕಾರವೇ ಅದಕ್ಕೆ ಉಲ್ಟಾ ನಡೆದುಕೊಳ್ಳುತ್ತಿರುವುದನ್ನು ಪ್ರಶ್ನಿಸಿದರು. ಫ್ಲೈಓವರ್‌ಗಳು ಈಗಾಗಲೇ ವಿಫಲವಾಗಿವೆ, ಮುಂದೆ ಸುರಂಗ ಮಾರ್ಗಗಳೂ ವಿಫಲವಾಗಲಿವೆ ಎಂದು ಅವರು ಭವಿಷ್ಯ ನುಡಿದರು.
"ಬೆಂಗಳೂರಿಗೆ ಬೇಕಿರುವುದು ಹೆಚ್ಚಿನ ಮೆಟ್ರೋ ರೈಲುಗಳು, ಹೆಚ್ಚಿನ ಬಸ್‌ಗಳು, ಉತ್ತಮ ಉಪನಗರ ರೈಲು ಮತ್ತು ವೈಜ್ಞಾನಿಕ ನಗರಾಭಿವೃದ್ಧಿ ಯೋಜನೆಯೇ ಹೊರತು, ವಿಫಲ ಆಲೋಚನೆಗಳ ದುಬಾರಿ ಸ್ಮಾರಕಗಳಲ್ಲ."
ತೇಜಸ್ವಿ ಸೂರ್ಯ, ಸಂಸದ.
ಮೆಟ್ರೋ ರೆಡ್ ಲೈನ್‌ಗೆ ಆದ್ಯತೆ ನೀಡಿ:
ಬೆಂಗಳೂರಿನ ಸಂಚಾರ ಸಮಸ್ಯೆಗೆ ಸಾರ್ವಜನಿಕ ಸಾರಿಗೆಯೊಂದೇ ದೀರ್ಘಾವಧಿಯ ಏಕೈಕ ಪರಿಹಾರವಾಗಿದೆ. ಸರ್ಕಾರಕ್ಕೆ ಟ್ರಾಫಿಕ್ ಕಡಿಮೆ ಮಾಡುವ ಪ್ರಾಮಾಣಿಕ ಇಚ್ಛೆಯಿದ್ದರೆ, ತಕ್ಷಣವೇ ಪ್ರಸ್ತಾವಿತ ರೆಡ್ ಲೈನ್ ಮೆಟ್ರೋ ಕಾರಿಡಾರ್ ಯೋಜನೆಯನ್ನು ವೇಗಗೊಳಿಸಬೇಕು ಎಂದು ತೇಜಸ್ವಿ ಸೂರ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.



