ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ :
ಬಾಲ ಗಂಗಾಧರ ತಿಲಕ್ ರವರು ಗಣೇಶ ಉತ್ಸವದ ಜನಕರಾಗಿ, ದೇಶ ವಿದೇಶ ದಲ್ಲಿ ರಾಷ್ಟ್ರೀಯತೆಯ ಭಾವನೆ ಮೂಡಿಸಿ ಬೆಳಸಿ, ಇಂದಿಗೂ ಯುವಶಕ್ತಿಯಲ್ಲಿ ಭಾರತೀಯತೆ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಿದ ಮಹಾನ್ ಪರಂಪರೆಯನ್ನು ಸೃಷ್ಟಿಸಿದ ಚೇತನದ ಇತಿಹಾಸ ಅಮರವೆಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಋಗ್ವೇದಿ ಯುತ್ ಕ್ಲಬ್ ಹಮ್ಮಿಕೊಂಡಿದ್ದ ಗಣೇಶ ಉತ್ಸವ ಹಾಗೂ ತಿಲಕ್ ರವರ ಚಿಂತನೆ ಕುರಿತು ಋಗ್ವೇದಿ ಕುಟೀರದ ಜೈ ಹಿಂದ್ ಕಟ್ಟೆಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡುತ್ತ ಪ್ರತಿ ಮನೆ ಮನೆಯಲ್ಲೂ ಗಣೇಶನ ಉತ್ಸವವನ್ನು ಆಚರಿಸಲಾಗುತ್ತಿದೆ. ಪ್ರತಿ ಭಾರತೀಯನ ಮನದಲ್ಲೂ ಗಣೇಶ ಅಚ್ಚಳಿಯದೆ ಉಳಿದಿದ್ದಾನೆ. ಗಣೇಶನ ಸಂಭ್ರಮ ಒಂದು ಐತಿಹಾಸಿಕ, ಪೌರಾಣಿಕ,ಸಾಮಾಜಿಕ ಆರ್ಥಿಕ,ಆಧ್ಯಾತ್ಮ, ತತ್ವ, ವೈಜ್ಞಾನಿಕ, ತರ್ಕ ಎಲ್ಲ ಅಂಶಗಳ ಸತ್ಯಗಳನ್ನು ಗಣೇಶನ ಉತ್ಸವಗಳ ಮೂಲಕ ತಿಳಿಯಬಹುದಾಗಿದೆ.
ಗಣೇಶ ಉತ್ಸವವು ಇಡೀ ದೇಶದ ಜನರನ್ನು ಒಂದುಗೂಡುವ ಮತ್ತು ಪರಸ್ಪರ ಪ್ರೀತಿಸಿ,ಸಾಮಾಜಿಕ ಏಕತೆ, ಭಾವೈಕ್ಯತೆ , ಧಾರ್ಮಿಕ ಚಿಂತನೆ, ಕಲೆ, ಸಾಹಿತ್ಯ, ಸಂಗೀತ,ನೃತ್ಯ, ಜನಪದ ಹಾಗೂ ಕಲಾವಿದರಗಳಿಗೆ ಹೊಸ ಶಕ್ತಿಯನ್ನು ನೀಡುತ್ತದೆ. ವ್ಯಾಪಾರ,ವಾಣಿಜ್ಯ,ಕೈಗಾರಿಕೆ, ಗುಡಿ ಕೈಗಾರಿಕೆ, ಪ್ರತಿ ಹಂತದಲ್ಲೂ ಗಣೇಶ ಉತ್ಸವದ ಪ್ರಭಾವವನ್ನು ಕಾಣಬಹುದಾಗಿದೆ. ಗಣೇಶ ಉತ್ಸವ ಭಾರತೀಯರ ಬಹುದೊಡ್ಡ ಹಬ್ಬವಾಗಿದ್ದು ಗಣಪತಿಯನ್ನು ಆಧ್ಯಾತ್ಮ ಶಕ್ತಿಯ ಜೊತೆಗೆ ಭಾವೈಕ್ಯತೆಯ ಶಕ್ತಿಯಾಗಿ ಮೂಡಿಸಿ ಸಾಮಾಜಿಕ ಏಕತೆಯನ್ನು ತಂದುಕೊಟ್ಟ ಕೀರ್ತಿ ಬಾಲಗಂಗಾಧರ ತಿಲಕರವರಿಗೆ ಸಲ್ಲುತ್ತದೆ. ಭಾರತದ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ದೇಶದ ಜನರ ಒಗ್ಗಟ್ಟನ್ನು ಪ್ರದರ್ಶಿಸಲು ಹಾಗೂ ಜನರನ್ನು ಸಂಘಟಿಸಲು ಆರಂಭಿಸಿದ ಗಣೇಶ ಉತ್ಸವ ಇಂದು ಗಲ್ಲಿ ಗಲ್ಲಿಗಳಲ್ಲಿ ಯುವಶಕ್ತಿ ಗಣೇಶನ ಆರಾಧನೆಯ ಮೂಲಕ ಮನುಷ್ಯ ಪ್ರೀತಿಗೆ, ಪರಸ್ಪರ ಸಹಕಾರ ಅರಿಯಲು ಸಹಾಯವಾಗಿದೆ.
ಗಣೇಶ ಉತ್ಸವ ಇಂದು ಭಾರತಕ್ಕೆ ಮಾತ್ರ ಸೀಮಿತವಾಗದೆ, ಇಡೀ ಜಗತ್ತಿನ ಎಲ್ಲಾ ದೇಶಗಳಲ್ಲೂ ಗಣೇಶ ಹಬ್ಬವನ್ನು ಆಚರಿಸುವ ಮೂಲಕ ಭಾರತೀಯ ಸಂಸ್ಕೃತಿ ಪರಂಪರೆಯನ್ನು ಪ್ರತಿಬಿಂಬಿಸುವ ಮಹಾನ್ ಪರಂಪರೆಯಾಗಿ ಬೆಳೆದು ಬಂದಿರುವುದು ತಿಲಕ್ ರವರ ದೂರ ದೃಷ್ಟಿಯಿಂದ ಎಂದು ತಿಳಿಸಿದರು.
ಗಣೇಶ ಮೂರ್ತಿಗೆ ಪುಷ್ಪವನ್ನು ಅರ್ಪಿಸುವ ಮೂಲಕ ಉದ್ಘಾಟನೆ ನೆರವೇರಿಸಿದ ಹಿರಿಯರಾದ ಸರೋಜಮ್ಮನವರು ಮಾತನಾಡಿ ಪ್ರತಿ ಮನೆಯಲ್ಲೂ ಸಂಭ್ರಮ ಉಂಟಾಗಲು ಗಣೇಶ ಉತ್ಸವ ಸಹಕಾರಿಯಾಗಿದೆ. ಗಣೇಶ ಉತ್ಸವದ ಮೂಲಕ ಹಿರಿಯರು ಕಿರಿಯರು ಎಲ್ಲರೂ ಸೇರಿ ಪರಸ್ಪರ ಗೌರವದಿಂದ ಕಲೆ ಸಾಹಿತ್ಯ ಸಂಗೀತ ಆವರಣ ಗೊಳಿಸಲು ಸಾಧ್ಯವಾಗಿದೆ ಎಂದರು.
ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷೆ ಶರಣ್ಯ ಎಸ್ ಋಗ್ವೇದಿ ಗಣೇಶ ಉತ್ಸವಗಳು ಪ್ರತಿಯೊಬ್ಬರಲ್ಲೂ ಸಂತೋಷವನ್ನು ತರುತ್ತದೆ. ಗಣೇಶ ಉತ್ಸವಗಳ ಆಯೋಜನೆ ಮತ್ತು ಗಣೇಶ ಉತ್ಸವಗಳ ಮೂಲಕ ಗಣಪತಿಯ ವಿಸರ್ಜನೆಯ ಉತ್ಸವಗಳು ಹೊಸತನಕ್ಕೆ ಸಾಕ್ಷಿಯಾಗಿದ್ದು ಸಮಾಜವನ್ನು ಅರಿಯಬಹುದಾಗಿದೆ.
ಬಾಲ ಗಂಗಾಧರ ತಿಲಕ್ ರವರು ಸ್ವರಾಜ್ಯ ಪರಿಕಲ್ಪನೆಯ ಹರಿಕಾರರು ಸ್ವದೇಶಿ ವಸ್ತುಗಳ ಬಗ್ಗೆ ಮತ್ತು ಭಾರತೀಯ ಸನಾತನ ಧರ್ಮದ ಸಂಸ್ಕೃತಿ ಮೌಲ್ಯಗಳ ಬಗ್ಗೆ ತಿಳಿಯಲು ಗಣೇಶ ಉತ್ಸವಗಳು ತುಂಬಾ ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾಮದ ಕುಸುಮ,ಶ್ರಾವ್ಯ, ಸುಹಾಸ್, ರವಿ, ಸುಂದರ್, ಸಾನಿಕ, ಮಾಲಾ, ಮುರುಗೇಶ್, ವಾಣಿಶ್ರೀ, ಸರಸ್ವತಿ ಇದ್ದರು.




