ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಗಣಿಗಾರಿಕೆ ಪ್ರಭಾವಿತ ವಲಯಗಳಲ್ಲಿ ಅನುಷ್ಠಾನಗೊಳ್ಳಲಿರುವ ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳವುದು ಕಡ್ಡಾಯ ಎಂದು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಸಂಜಯ್ ಎಸ್.ಬಿಜ್ಜೂರ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ (ಗಣಿಗಾರಿಕೆಯ ಪ್ರಭಾವಕ್ಕೆ ಒಳಗಾದ ವಲಯಗಳಿಗೆ ಸಮಗ್ರ ಪರಿಸರ ಯೋಜನೆ) ಸಿಇಪಿಎಂಐಝಡ್ ಯೋಜನೆಯಡಿ ಕೈಗೊಳ್ಳಲಿರುವ ಕಾಮಗಾರಿ, ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಣಿಭಾದಿತ ಪ್ರದೇಶಗಳ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳಲಿರುವ ವಸತಿ ಯೋಜನೆಗಳಲ್ಲಿ ಯಾವುದೇ ರೀತಿಯ ಒತ್ತಡಗಳಿಗೆ ಮಣಿಯದೇ, ನೈಜ ಹಾಗೂ ಅರ್ಹ ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಬೇಕು. ನೈಜ ಪರಿಸ್ಥಿತಿಯನ್ನು ಪರಿಶೀಲಿಸಿ, ಯಾರು ನಿಜವಾಗಿಯೂ ಮನೆಗೆ ಅರ್ಹರಿದ್ದಾರೋ ಅವರಿಗೆ ಮಾತ್ರ ಯೋಜನೆಯ ಲಾಭ ಸಿಗುವಂತೆ ನೋಡಿಕೊಳ್ಳಬೇಕು. ಈ ಕುರಿತು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ವಸತಿ ಯೋಜನೆಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲು ನಿವೇಶನ ರಹಿತರು ಮತ್ತು ವಸತಿ ರಹಿತರ ವರ್ಗೀಕರಣ ಎಂದು ಎರಡು ಗುಂಪುಗಳಾಗಿ ವಿಂಗಡಿಸಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ರಹಿತರಾಗಿರುವವರಿಗೆ ಮೊದಲ ನಿವೇಶನ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಿದೆ. ಇದಕ್ಕಾಗಿ ಗ್ರಾಮದಿಂದ ಗರಿಷ್ಟ 2 ಕಿ.ಮೀ ವ್ಯಾಪ್ತಿಯೊಳಗೆ ಸೂಕ್ತವಾದ ಭೂಮಿಯನ್ನು ಗುರುತಿಸುವ ಪ್ರಕ್ರಿಯೆ ಚುರುಕುಗೊಳಿಸಬೇಕು. ಭೂಮಿ ಗುರುತಿಸಿದ ನಂತರ ಆ ನಿವೇಶನಗಳನ್ನು ಲೇಔಟ್ ಅನುಮೋದನೆಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರಸ್ತಾವನೆ ಸಲ್ಲಿಸಬೇಕು. ಹೊಸದಾಗಿ ನಿರ್ಮಿಸುವ ಲೇಔಟ್‍ಗಳಲ್ಲಿ ರಸ್ತೆಗಳು, ಕುಡಿಯುವ ನೀರಿನ ಸೌಲಭ್ಯ, ಬೀದಿ ದೀಪಗಳು ಹಾಗೂ ವಿದ್ಯುದ್ವೀಕರಣದಂತಹ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಹೊಂದಿರುವ ಸುಸಜ್ಜಿತ ಕಾಲೋನಿಗಳಾಗಬೇಕು. ಯೋಜನಾ ನಕ್ಷೆಯಲ್ಲೇ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಅಂಗನವಾಡಿ ಕೇಂದ್ರಗಳ ಸ್ಥಾಪನೆಗೆ ಅಗತ್ಯವಿರುವ ಜಾಗವನ್ನು ಕಾಯ್ದಿರಿಸಿ, ಸಂಬಂಧಪಟ್ಟ ಇಲಾಖೆಗಳಿಂದ ಮಂಜೂರಾತಿ ಪಡೆದುಕೊಳ್ಳಬೇಕು. ಹೊಸ ಕಾಲೋನಿಯ ಮುಖ್ಯ ಗ್ರಾಮದಿಂದ ಉತ್ತಮ ಸಂಪರ್ಕ ರಸ್ತೆಯನ್ನು ಕಲ್ಪಿಸು ಬಗ್ಗೆ ವಿಶೇಷ ಗಮನ ಹರಿಸಬೇಕು. ಯಾವುದೇ ಕಾರಣಕ್ಕೂ ಲೇಔಟ್‍ಗಳನ್ನು ಸ್ಮಶಾನಗಳ ಪಕ್ಕದಲ್ಲಿ ನಿರ್ಮಿಸಬಾರದು. ಅಂತಹ ಸ್ಥಳಗಳಲ್ಲಿ ಜನರು ವಾಸಿಸಲು ಹಿಂಜರಿಯುವುದರಿಂದ ಸೂಕ್ತವಾದ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷೆ ಸಲ್ಲದು: ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ವಿವಿಧ ಕಾಮಗಾರಿಗಳ ಅನುಷ್ಠಾನದ ಹೊಣೆಗಾರಿಕೆ ಆಯಾ ಇಲಾಖಾ ಅಧಿಕಾರಿಗಳದ್ದೇ ಆಗಿದ್ದು, ಇದರಲ್ಲಿ ಯಾವುದೇ ರೀತಿಯ ವಿಳಂಬ ಹಾಗೂ ನಿರ್ಲಕ್ಷೆ ಮಾಡುವಂತಿಲ್ಲ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸರ್ಕಾರದ ಮಟ್ಟದಲ್ಲಿ ಮತ್ತು ನಿಗಮದ ವತಿಯಿಂದ ಯೋಜನೆಗಳ ಸಿದ್ದತೆ, ಅನುಮೋದನೆ ಹಾಗೂ ಅನುದಾನದ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಆದರೆ ಕ್ಷೇತ್ರ ಮಟ್ಟದಲ್ಲಿ ಇವುಗಳನ್ನು ಜಾರಿಗೆ ತರಬೇಕಾದವರು ಜಿಲ್ಲಾಮಟ್ಟದ ಅಧಿಕಾರಿಗಳಾಗಿದ್ದು, ನೀವುಗಳು ಯೋಜನೆಯ ಭಾಗವಾಗಿದ್ದು, ಪ್ರತಿಯೊಂದು ಹಂತವನ್ನೂ ಸೂಕ್ಷ್ಮವಾಗಿ ಗಮನಿಸಿ ಕೆಲಸ ಮಾಡಬೇಕು. ಗಣಿಗಾರಿಕೆ ಪ್ರಭಾವಿತ ಪ್ರದೇಶಗಳಲ್ಲಿ ಆರೋಗ್ಯ ಸುಧಾರಣೆಗಾಗಿ ವಿಶೇಷ ಕಾರ್ಯಕ್ರಗಳ ಹಮ್ಮಿಕೊಂಡಿದ್ದು, ಕ್ಷಯ ರೋಗ ಪೀಡಿತರಿಗೆ ಪೌಷ್ಠಿಕ ಆಹಾರ ವಿತರಣೆ, ನವಜಾತ ಶಿಶುಗಳ ಆರೈಕೆ ಸೇರಿದಂತೆ ಹಲವು ಕಾರ್ಯಕ್ರಮಗಳ ರೂಪಿಸಿದ್ದು, ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದ ಅವರು ವಿವಿಧ ಅಭಿವೃದ್ಧಿ ಯೋಜನೆಗಳು ಹಾಗೂ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಜಿಲ್ಲೆಯ ಪರಿಸರ ಪುನರಸ್ಥಾಪನೆ ಜಿ.ಪಂ.ಸಿಇಓ ಡಾ.ಆಕಾಶ್ ಚಿಂತನೆ:
ಗಣಿಗಾರಿಕೆಯಂತಹ ಮಾನವ ಚಟುವಟಿಕೆಯಿಂದ ಜಿಲ್ಲೆಯ ಪರಿಸರದ ಮೇಲೆ ಉಂಟಾಗಿರುವ ಹಾನಿ ಹಾಗೂ ಒತ್ತಡವನ್ನು ನಿವಾರಿಸಿ, ವೈಜ್ಞಾನಿಕ ಕ್ರಮಗಳ ಮೂಲಕ ಜಿಲ್ಲೆಯ ಪರಿಸರ ಪುನರ್‍ಸ್ಥಾಪಿಸಲು ಜಿ.ಪಂ.ಸಿಇಓ ಡಾ.ಆಕಾಶ್ ಚಿಂತನೆ ನಡೆಸಿದ್ದಾರೆ. ಈ ಕುರಿತು ಸಭೆಯಲ್ಲಿ ಪ್ರಾತ್ಯಕ್ಷಿಕೆ ನೀಡಿದ ಅವರು ವಿವಿಧ ಪರಿಸರ ಸ್ನೇಹಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಅಂರ್ತಜಲ ಮಟ್ಟ ಜಿಲ್ಲೆಯಲ್ಲಿ ಕಳವಕಾರಿ ಮಟ್ಟಕ್ಕೆ ಕುಸಿದೆ. ಇದು ಹೀಗೆಯ ಮುಂದುವರಿದರೆ ಅಂರ್ತಜಲ ಕ್ಷಾಮ ಒದಗಿಬರಬಹುದು. ಇದು ಜಿಲ್ಲೆಯ ಜನ ಜೀವನ, ಕೃಷಿ ಹಾಗೂ ತೋಟಗರಿಕೆಯ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ಆದ್ದರಿಂದ ಅಗತ್ಯವಾಗಿ ಜಲ ಮರುಪೂರಣ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯಯಿದೆ. ಜಿಲ್ಲೆಯವರೇ ಆದ ಜಲತಜ್ಞ ದೇವರಾಜ ರೆಡ್ಡಿ ಅವರು ಸಲಹೆ ಮೇರೆಗೆ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಜಲ ಮರುಪೂರಣ ವ್ಯವಸ್ಥೆ ಅಳವಡಿಕೆ ಚಿಂತಿಸಲಾಗುತ್ತಿದೆ. ಇದರೊಂದಿಗೆ ಜಿಲ್ಲೆಯಲ್ಲಿ ವರ್ಷದ 300 ದಿನ ಬಿಸಿಲು ಇರುತ್ತದೆ. ಶಾಲೆಗಳಲ್ಲಿ ಸೋಲಾರ್ ಪ್ಯಾನಲ್‍ಗಳನ್ನು ಅಳವಡಿಸಿ, ವಿದ್ಯುತ್ ಉತ್ಪಾದನೆ ಮಾಡುವ ಮೂಲಕ, ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡಬಹುದು. ಇದರೊಂದಿಗೆ ಜಿಲ್ಲೆಯ ಸಾಕಷ್ಟು ಅಂಗನವಾಡಿ ಕೇಂದ್ರಗಳಲ್ಲಿ ಪದವಿ ಹಾಗೂ ಪಿ.ಯು.ನಂತರ ವಿದ್ಯಾಬ್ಯಾಸ ತರಬೇತಿ ಪಡೆದ ಸಾಕಷ್ಟು ಕಾರ್ಯಕರ್ತೆಯರು ಇದ್ದಾರೆ. ಇವರಿಗೆ ತರಬೇತಿ ನೀಡಿ, ಅಂಗನವಾಡಿ ಮಕ್ಕಳಿಗೆ ಶಾಲೆ ಪೂರ್ವ ವಿದ್ಯಾಭ್ಯಾಸವನ್ನು ನೀಡಬಹುದು. ಇದರಿಂದ ಮಕ್ಕಳ ಕಲಿಕೆ ಮಟ್ಟ ಉತ್ತಮಗೊಳ್ಳಲಿದೆ ಎಂದು ಜಿ.ಪಂ.ಸಿಇಓ ಡಾ.ಆಕಾಶ್ ಸಭೆಯಲ್ಲಿ ತಿಳಿಸಿದರು.
ದೆಹಲಿ, ಚಂಡಿಗಡ, ಸೂರತ್ ಜಿಲ್ಲೆಗಳು ಶಾಲೆಗಳ ಛಾವಣಿ ಮೇಲೆ ಸೋಲಾರ್ ಅಳವಡಿಸುವಲ್ಲಿ ದೇಶಕ್ಕೆ ಮುಂಚೂಣಿಯಲ್ಲಿವೆ. ಸೋಲಾರ್ ಫಲಕಗಳ ಉತ್ಪಾದನೆಯು ಸೂರತ್ ನಗರದಲ್ಲಿ ಹೆಚ್ಚಾಗಿದೆ. ಜಿಲ್ಲೆಯ ನಿಯೋಗ ಸೂರತ್ ನಗರಕ್ಕೆ ಭೇಟಿ ನೀಡಿ ಯೋಜನೆಯ ನೀಲನಕ್ಷೆ ರೂಪಿಸಲಿ. ಶಾಲೆ ಹಾಗೂ ಅಂಗನವಾಡಿಗಳ ಮೈದಾನದಲ್ಲಿ ನುಗ್ಗೆ, ಕರಿಬೇವು ಸೇರಿದಂತೆ ತರಕಾರಿ ಗಿಡಗಳು, ನೆರಳಿಗಾಗಿ ಹೊಂಗೆ ಮರಗಳನ್ನು ನೆಡಲು ಸಹ ಯೋಜನೆ ರೂಪಿಸಿದರೆ ಕೆ.ಎಂ.ಇ.ಆರ್.ಸಿ ಯಿಂದ ಅನಮೋದನೆ ನೀಡುವುದಾಗಿ ಡಾ.ಎಸ್.ಸಂಜಯ್ ಬಿಜ್ಜೂರ್ ಹೇಳಿದರು.
ಪ್ರಾಥಮಿಕ ಹಂತದಲ್ಲಿ 300 ಶಾಲೆಗಳಲ್ಲಿ ಸೋಲಾರ್ ಪ್ಯಾನಲ್ ಅಳವಿಡಿಸಿ, ಉತ್ಪಾದನೆಯಾದ ವಿದ್ಯುತ್‍ನ್ನು ಕೆ.ಪಿ.ಟಿ.ಸಿ.ಎಲ್. ವಿದ್ಯುತ್ ಗ್ರಿಡ್ ಹರಿಸಲಾಗುವುದು. ಇದೇ ಶಾಲೆಗಳಲ್ಲಿ ಜಲ ಮರುಪೂರಣ ವ್ಯವಸ್ಥೆ ಅಳವಡಿಸಲಾಗುವುದು. ಜಿಲ್ಲೆಯಲ್ಲಿ ಒಟ್ಟು 35,000 ಮಕ್ಕಳು ಅಂಗನವಾಡಿಗಳ ವ್ಯಾಪ್ತಿಗೆ ಬರುತ್ತಾರೆ. ಇವರಿಗೆ ಪ್ರಾಯೋಗಿಕ ಜ್ಞಾನವುಳ್ಳ ಶಿಕ್ಷಣವನ್ನು ನೀಡಲು ಯೋಜನೆ ರೂಪಿಸುವುದಾಗಿ ಜಿ.ಪಂ.ಸಿಇಓ ಡಾ.ಆಕಾಶ್ ಸ್ಪಷ್ಟಪಡಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯನಾಯ್ಕ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಎಂ.ಜೆ.ಮಹೇಶ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಹನುಮಂತಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.



