ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ 'ಸ್ಟಿಂಗ್ ಆಪರೇಷನ್' ಜಾಲದ ಬಗ್ಗೆ ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಗುರುವಾರ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ತಮ್ಮ ಅಧಿಕಾರಾವಧಿಯಲ್ಲಿ ತಮ್ಮನ್ನೇ 'ಟ್ರ್ಯಾಪ್' ಮಾಡಲು ಯತ್ನಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿರುವ ಅವರು, ಇದಕ್ಕೆ ಸಂಬಂಧಿಸಿದ ಎಲ್ಲ ಸಾಕ್ಷ್ಯಾಧಾರಗಳು ತಮ್ಮ ಬಳಿಯೇ ಇವೆ ಎಂದು ತಿಳಿಸಿದ್ದಾರೆ.
ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಆಂತರಿಕವಾಗಿ ಸಚಿವರಿಗೆ ಎಚ್ಚರಿಕೆ ನೀಡಿದ್ದ ಸಿಎಂ, ಇದೀಗ ಬಹಿರಂಗವಾಗಿಯೇ ಈ ವಿಷಯವನ್ನು ಹೊರಹಾಕುವ ಮೂಲಕ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಕಾರಣರಾಗಿದ್ದಾರೆ.
ಸಿಎಂ ಡಿ.ಕೆ. ಶಿವಕುಮಾರ್ ಪ್ರಮುಖ ಹೇಳಿಕೆಗಳು: ನನ್ನನ್ನೇ ಟ್ರ್ಯಾಪ್ ಮಾಡಲು ಯತ್ನ: "ನಾನು ಮುಖ್ಯಮಂತ್ರಿಯಾದ ಬಳಿಕ ನನ್ನನ್ನೇ ಟ್ರ್ಯಾಪ್ ಮಾಡಲು ಪ್ರಯತ್ನಿಸಿದರು. ನಾನು ಈಗ ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಗಾಳಿಯಲ್ಲಿ ಗುಂಡು ಹಾರಿಸುತ್ತಿಲ್ಲ; ನನ್ನ ಬಳಿ ಸ್ಪಷ್ಟ ಸಾಕ್ಷ್ಯಾಧಾರಗಳಿವೆ."
ಪಿತೂರಿ ಹಾಗೂ ಹಣಕಾಸು ನೆರವು: ಈ ಷಡ್ಯಂತ್ರದ 'ಪಿತಾಮಹ' ಯಾರು ಮತ್ತು ಇದಕ್ಕೆ ಹಿಂಬದಿಯಿಂದ ಹಣಕಾಸಿನ ನೆರವು ನೀಡುತ್ತಿFರುವವರು ಯಾರು ಎಂಬ ಬಗ್ಗೆಯೂ ಅವರು ಪರೋಕ್ಷವಾಗಿ ಉಲ್ಲೇಖಿಸಿ ರಾಜಕೀಯ ವಲಯದಲ್ಲಿ ಬಾಂಬ್ ಸಿಡಿಸಿದ್ದಾರೆ.
ಸಚಿವ ಸಂಪುಟದಲ್ಲೂ ಎಚ್ಚರಿಕೆ ನೀಡಿದ್ದ ಸಿಎಂ: ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಸಚಿವರಿಗೆ ಆಂತರಿಕ ಎಚ್ಚರಿಕೆ ನೀಡಿದ್ದರು. ರಾಜ್ಯದ ಐವರು ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಸಲು ಪ್ರಯತ್ನಗಳು ನಡೆಯುತ್ತಿದ್ದು, ಎಲ್ಲರೂ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಸ್ವತಃ ಸಿಎಂ ಅವರೇ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಈ ಮಾಹಿತಿ ಹಂಚಿಕೊಂಡಿರುವುದು ಮಹತ್ವ ಪಡೆದುಕೊಂಡಿದೆ.
ಪ್ರಿಯಾಂಕ್ ಖರ್ಗೆ ವಾಗ್ದಾಳಿ: ಇದೇ ವೇಳೆ ಸಚಿವ ಸಂಪುಟ ಸಭೆಯ ಎಚ್ಚರಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ,
"ಎಲ್ಲರೂ ಜಾಗರೂಕರಾಗಿರಬೇಕು ಎಂಬ ಉದ್ದೇಶದಿಂದ ಸಿಎಂ ಅವರಿಗೆ ಬಂದ ಮಾಹಿತಿ ಆಧರಿಸಿ ಮುನ್ನೆಚ್ಚರಿಕೆ ನೀಡಿದ್ದಾರೆ. ಗುಪ್ತಚರ ಇಲಾಖೆಯಿಂದ ಮಾಹಿತಿ ಬರುತ್ತದೆ, ಯಾರು ಏನೇನು ಮಾಡುತ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ" ಎಂದಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಈಗಾಗಲೇ ಕಿರುಕುಳ ನೀಡಲು ಆರಂಭಿಸಲಾಗಿದೆ ಎಂದು ಆರೋಪಿಸಿದ ಅವರು, "ನಾನು ಬರೆದುಕೊಡುತ್ತೇನೆ, ಇನ್ನು ಕೆಲವೇ ದಿನಗಳಲ್ಲಿ ನನ್ನ ವಿರುದ್ಧವೂ ಇದೇ ರೀತಿ ಸ್ಟಿಂಗ್ ಆಪರೇಷನ್ ಪ್ರಯತ್ನಗಳು ಶುರುವಾಗಲಿವೆ" ಎಂದು ತಿಳಿಸಿದರು.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗಳಿಗೆ ತಿರುಗೇಟು ನೀಡಿದ ಪ್ರ್ರಿಯಾಂಕ್ ಖರ್ಗೆ, "ಮಾಜಿ ಸಿಎಂ ಹಾಗೂ ಹಾಲಿ ಕೇಂದ್ರ ಸಚಿವರಾದವರು ತಮ್ಮ ಕುರ್ಚಿಯ ಮರ್ಯಾದೆಗೆ ತಕ್ಕಂತೆ ಗೌರವಯುತವಾಗಿ ಮಾತನಾಡಬೇಕು. ಸಾಕ್ಷ್ಯಾಧಾರಗಳಿಲ್ಲದೆ ಮಾತನಾಡಿದರೆ ಬೇರೆಯವರೂ ಅದೇ ಭಾಷೆಯಲ್ಲಿ ಉತ್ತರಿಸಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದರು.




