ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ್ದ ಬೆಂಗಳೂರಿನ ಕೆ.ಆರ್.ಪುರಂನ ತ್ರಿವಳಿ ಕೊಲೆ ಪ್ರಕರಣದ ತನಿಖೆಯಲ್ಲಿ ಪೊಲೀಸರು ಮತ್ತೊಂದು ಮಹತ್ವದ ಯಶಸ್ಸು ಸಾಧಿಸಿದ್ದಾರೆ.
ಹೆತ್ತ ತಂದೆ, ತಾಯಿ ಹಾಗೂ ತಂಗಿಯನ್ನೇ ಹತ್ಯೆಗೈದು ಪರಾರಿಯಾಗಿದ್ದ ಮುಖ್ಯ ಆರೋಪಿ ಶ್ವೇತಾ ಬಂಧನದ ಬೆನ್ನಲ್ಲೇ, ಆಕೆಯ ಪ್ರಿಯಕರ ಹಾಗೂ ಪ್ರಕರಣದ 2ನೇ ಆರೋಪಿ ಕೆನ್ನೆತ್‌ನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ದಾರುಣ ಹತ್ಯಾಕಾಂಡದ ಬಳಿಕ ಈ ಪ್ರೇಮಿಗಳಿಬ್ಬರೂ ಪುದುಚೇರಿಗೆ ಓಡಿಹೋಗಿ, ಅಲ್ಲಿ ಸಿಕ್ಕಿಬೀಳುವ ಭಯದಿಂದ ಬೇರೆ ಬೇರೆಯಾಗಿ ತಲೆಮರೆಸಿಕೊಂಡಿದ್ದರು. ಗುರುವಾರ ಶ್ವೇತಾಳನ್ನು ಸೆರೆಹಿಡಿದಿದ್ದ ಖಾಕಿ ಪಡೆ, ಇದೀಗ ಆಕೆಯ ಪ್ರಿಯಕರನನ್ನೂ ಕಂಬಿ ಹಿಂದೆ ತಳ್ಳಿದೆ.
ಪ್ರಿಯಕರನ ಬೇಟೆಗೆ ರಚನೆಯಾಗಿತ್ತು 3 ವಿಶೇಷ ತಂಡ!:
ಹತ್ಯೆ ಬಳಿಕ ನಾಪತ್ತೆಯಾಗಿದ್ದ ಕೆನ್ನೆತ್ ಪತ್ತೆಗಾಗಿ ನಗರ ಪೊಲೀಸರು 3 ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದರು. ತಮಿಳುನಾಡು ಹಾಗೂ ಪುದುಚೇರಿಯ ವಿವಿಧ ಭಾಗಗಳಲ್ಲಿ ಬೀಡುಬಿಟ್ಟಿದ್ದ ಪೊಲೀಸರು ಜಾಲ ಬೀಸಿ ಕೊನೆಗೂ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಇಬ್ಬರೂ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ.
ಹಂತಕಿ ಶ್ವೇತಾ 7 ದಿನ ಪೊಲೀಸ್ ಕಸ್ಟಡಿಗೆ:
ಬಂಧನಕ್ಕೊಳಗಾಗಿದ್ದ ಶ್ವೇತಾಳನ್ನು ಪೊಲೀಸರು 47ನೇ ಎಸಿಜೆಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ತ್ರಿವಳಿ ಕೊಲೆಯ ಹಿಂದಿರುವ ನಿಗೂಢ ಕಾರಣಗಳು, ಹತ್ಯೆಯ ಕೃತ್ಯಕ್ಕೆ ಬಳಸಿದ ಆಯುಧಗಳು ಹಾಗೂ ಇವರಿಬ್ಬರ ಜೊತೆ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಅಸಲಿ ಸತ್ಯವನ್ನು ಬಿಚ್ಚಿಡಲು ನ್ಯಾಯಾಲಯವು ಆರೋಪಿಯನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಕೊಲೆಯ ಹಿಂದಿನ ರಹಸ್ಯ ಭೇದಿಸಲು ತೀವ್ರ ವಿಚಾರಣೆ:
ಸ್ವಂತ ರಕ್ತಸಂಬಂಧಿಗಳನ್ನೇ ಇಷ್ಟು ಕ್ರೂರವಾಗಿ ಕೊಲ್ಲಲು ಪ್ರಿಯಕರನ ಪ್ರಚೋದನೆ ಏನಿತ್ತು? ಹಣದ ಆಸೆಯೇ ಅಥವಾ ಪ್ರೀತಿಯ ಹುಚ್ಚೇ? ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಲು ಪೊಲೀಸರು ಇಬ್ಬರೂ ಆರೋಪಿಗಳನ್ನು ಮುಖಾಮುಖಿ ಕೂರಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಈ ಭೀಕರ ಕೊಲೆ ಪ್ರಕರಣದ ಸಂಪೂರ್ಣ ವಿವರಗಳು ಹೊರಬೀಳುವ ಸಾಧ್ಯತೆ ಇದೆ.



