ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಯಲ್ಲಿ ಉಮರ್ ಖಾಲಿದ್ ಕುರಿತ ಡಾಕ್ಯುಮೆಂಟರಿ ಪ್ರದರ್ಶನದ ಸಂದರ್ಭದಲ್ಲಿ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದು ಬಣ್ಣಿಸಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ವಿವಾದ ಹಾಗೂ ಚರ್ಚೆಗೆ ಗ್ರಾಸವಾಗಿದೆ.
ಬಿಜೆಪಿ ಮತ್ತು ಎಬಿವಿಪಿ ಈ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದ್ದರೂ, ಹರಿಪ್ರಸಾದ್ ಅವರು ತಮ್ಮ ಹೇಳಿಕೆಯಿಂದ ಹಿಂದೆ ಸರಿದಿಲ್ಲ; ಬದಲಾಗಿ ಮತ್ತಷ್ಟು ಸ್ಪಷ್ಟತೆಯೊಂದಿಗೆ ಅದನ್ನು ಸಮರ್ಥಿಸಿಕೊಂಡಿದ್ದಾರೆ.
ಹರಿಪ್ರಸಾದ್ ಮುಖ್ಯ ವಾದಗಳು ಮತ್ತು ವಾಗ್ದಾಳಿಗಳು: ದೇಶದ್ರೋಹಿಗಳ ವ್ಯಾಖ್ಯಾನ: ದೇಶದ ಜನರ ಪರವಾಗಿ ಧ್ವನಿ ಎತ್ತಿದ ವಿದ್ಯಾವಂತ ಹಾಗೂ ಜನಪರ ಚಳವಳಿಗಾರರಾದ ಉಮರ್ ಖಾಲಿದ್ ಅವರನ್ನು ದೇಶದ್ರೋಹಿ ಎಂದು ಕರೆಯುವವರೇ ನಿಜವಾದ ರಾಷ್ಟ್ರದ್ರೋಹಿಗಳು ಎಂದು ಅವರು ತಿರುಗೇಟು ನೀಡಿದ್ದಾರೆ.
ಬಿಜೆಪಿ ಮತ್ತು ಸಂಘಪರಿವಾರಕ್ಕೆ ವ್ಯಂಗ್ಯ: "ಉಮರ್ ಖಾಲಿದ್ ಆರ್ಎಸ್ಎಸ್ ನಂತೆ ಪಾಕಿಸ್ತಾನದ ಜೊತೆ ಗುಪ್ತ ಚರ್ಚೆ ನಡೆಸಿಲ್ಲ ಅಥವಾ ಸಂಘ ಪರಿವಾರದವರಂತೆ ಐಎಸ್ಐ ಏಜೆಂಟ್ಗಳ ಜೊತೆ ಮಾತುಕತೆ ನಡೆಸಿಲ್ಲ. ಕನಿಷ್ಠ ಪಕ್ಷ ಆಮಂತ್ರಣವೇ ಇಲ್ಲದೆ ಪಾಕ್ ಪ್ರಧಾನಿಯ ಕುಟುಂಬದ ಕಾರ್ಯಕ್ರಮಕ್ಕೆ ಹೋಗಿ ಬಿರಿಯಾನಿ ತಿಂದಿಲ್ಲ" ಎಂದು ವ್ಯಂಗ್ಯವಾಡಿದ್ದಾರೆ.
ಪ್ರಜಾಪ್ರಭುತ್ವದ ಆಶಯ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜಕೀಯ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದೆ, ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಪ್ರತಿಯೊಬ್ಬರನ್ನೂ ‘ದೇಶದ್ರೋಹ’ ಎಂದು ಕರೆಯುತ್ತಿರುವುದು ಪ್ರಜಾಪ್ರಭುತ್ವದ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದ್ದಾರೆ.
‘ವಿಜಯೇಂದ್ರ ಕೆಪಿಸಿಸಿಯ ವಾಚ್‌ಮನ್‌ಆಗಿದ್ದಾರೆಯೇ?’:
ಕಾಂಗ್ರೆಸ್ ಪಕ್ಷದ ಮನೆಗೆ ಮೂರು ಬಾಗಿಲು ಎಂದು ವಿಜಯೇಂದ್ರ ಟೀಕಿಸಿದ್ದಕ್ಕೆ ಹರಿಪ್ರಸಾದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಬಿಜೆಪಿಯವರು ಮೊದಲು ತಮ್ಮ ಮನೆಯ ಬಾಗಿಲುಗಳನ್ನು ಎಣಿಸಿಕೊಳ್ಳಲಿ. ಕಾಂಗ್ರೆಸ್ ಮನೆಗೆ ಮೂರು ಬಾಗಿಲುಗಳಿದ್ದರೆ, ಬಿಜೆಪಿಯ ಮನೆ ಈಗ 'ನೂರು ಬಾಗಿಲು' ಆಗಿದೆ. ಕಾಂಗ್ರೆಸ್ ಕಚೇರಿಯ ಬಾಗಿಲು-ಕಿಟಕಿಗಳನ್ನು ಎಣಿಸುತ್ತಾ ಕೂರಲು ವಿಜಯೇಂದ್ರ ಕೆಪಿಸಿಸಿಯ ವಾಚ್‌ಮನ್‌ಆಗಿದ್ದಾರೆಯೇ?" ಎಂದು ತೀವ್ರವಾಗಿ ಪ್ರಶ್ನಿಸಿದ್ದಾರೆ.




