ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಆತ್ರೇಯ ಆಯುರ್ವೇದ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಸ್ತವ್ಯಸ್ತತೆಯಿಂದಾಗಿ ಬೀದಿಗೆ ಬಿದ್ದಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್ ಒತ್ತಾಯಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡಿಗರ ಕರವೇ ಹಾಗೂ ಆತ್ರೇಯ ಆಯುರ್ವೇದ ಕಾಲೇಜಿನ ಪೋಷಕರು ಮತ್ತು ವಿದ್ಯಾರ್ಥಿಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜಿನ ಸಮಸ್ಯೆಗಳ ಪರಿಹಾರಕ್ಕಾಗಿ ಈಗಾಗಲೇ ಮೂರು ದಿನಗಳ ಕಾಲ ಧರಣಿ ನಡೆಸಿ ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಆತಂತ್ರದಲ್ಲಿರುವ ಕಾರಣ, ಸರ್ಕಾರವೇ ನೇರವಾಗಿ ಜವಾಬ್ದಾರಿ ವಹಿಸಿಕೊಂಡು ನ್ಯಾಯ ದೊರಕಿಸಿಕೊಡಬೇಕು ಎಂಬ ಉದ್ದೇಶದಿಂದ ನಮ್ಮ ಹೋರಾಟ ಮುಂದುವರಿದಿದೆ ಎಂದರು.
ಆಡಳಿತ ಮಂಡಳಿಯಿಂದ ವಿದ್ಯಾರ್ಥಿಗಳ ದಿಕ್ಕುತಪ್ಪಿಸುವ ಯತ್ನ:
ಕಾಲೇಜು ಆಡಳಿತ ಮಂಡಳಿಯು ಸಮಸ್ಯೆಗಳನ್ನು ಬಗೆಹರಿಸುವ ಬದಲು ವಿದ್ಯಾರ್ಥಿಗಳನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ. ತರಗತಿ ಪ್ರತಿನಿಧಿಗಳಿಗೆ ಸಂದೇಶಗಳನ್ನು ಕಳುಹಿಸಿ, "ಯಾರೂ ಪ್ರಶ್ನೆ ಮಾಡಬೇಡಿ, ನಾವೇ ಸಂಸ್ಥೆಯನ್ನು ಪುನರ್ ತೆರೆಯುತ್ತೇವೆ" ಎಂದು ನಂಬಿಸುತ್ತಿದೆ. ಆಡಳಿತ ಮಂಡಳಿಯ ಈ ಧೋರಣೆಯನ್ನು ಪ್ರಶ್ನಿಸದಿದ್ದರೆ ವಿದ್ಯಾರ್ಥಿಗಳ ಭವಿಷ್ಯ ಅಂದಕಾರವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬ್ಯಾಂಕ್ ವಶದಲ್ಲಿರುವ ವಿಚಾರ ಅಧಿಕಾರಿಗಳ ಗಮನಕ್ಕೆ:
ಆತ್ರೇಯ ಆಯುರ್ವೇದ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಬ್ಯಾಂಕ್ ವಶಕ್ಕೆ ಒಳಪಟ್ಟಿರುವ ಗಂಭೀರ ವಿಷಯ ಸರ್ಕಾರದ ಗಮನಕ್ಕೆ ಬಂದಿಲ್ಲ. ಈ ಕುರಿತು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಸಂಘಟನೆಯಿಂದ ನಿರಂತರವಾಗಿ ಮಾಡಲಾಗುತ್ತಿದೆ. ಕಾಲೇಜು ಮುಚ್ಚಿ ಈಗಾಗಲೇ ಎರಡು ತಿಂಗಳುಗಳು ಕಳೆದಿವೆ. ಇದರಿಂದ ಮಕ್ಕಳ ಶೈಕ್ಷಣಿಕ ಜೀವನ, ಕ್ಲಿನಿಕಲ್ ತರಬೇತಿ, ಇಂಟರ್ನ್ಶಿಪ್, ಪರೀಕ್ಷೆಗಳು ಮತ್ತು ಪದವಿ ಪೂರ್ಣಗೊಳಿಸುವಿಕೆಯಲ್ಲಿ ದೊಡ್ಡ ಮಟ್ಟದ ಹಿನ್ನಡೆಯಾಗಿದ್ದು, ಇದನ್ನು ಮನಗಂಡು ಆಡಳಿತ ಮಂಡಳಿ ಕೂಡಲೇ ಕಾಲೇಜನ್ನು ಪುನರಾರಂಭಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕನ್ನಡಿಗರ ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ರಮೇಶ್, ರಾಜ್ಯ ಮುಖಂಡ ಪಿ. ವಾಸು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾಯೇಗೌಡ, ಜಿಲ್ಲಾ ಯುವ ಘಟಕದ ಅಧ್ಯಕ್ಷ ರಂಜಿತ್ ಗೌಡ, ತಾಲೂಕು ಉಪಾಧ್ಯಕ್ಷ ಅಂಬರೀಷ್, ತಾಲೂಕು ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್, ಕಾರ್ಮಿಕ ಘಟಕದ ಅಧ್ಯಕ್ಷ ಶಿವಶಂಕರ್ ರೆಡ್ಡಿ, ಸಾಸಲು ಹೋಬಳಿ ಅಧ್ಯಕ್ಷ ಲಕ್ಷ್ಮೀನಾರಾಯಣ ಹಾಗೂ ಮುಖಂಡ ಶಿವಶಂಕರ್ ಉಪಸ್ಥಿತರಿದ್ದರು.




