ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸರಿ ಸುಮಾರು ನಾಲ್ಕು ದಶಕಗಳ ಹಿಂದಿನ ಮಾತು. ನಾವಿನ್ನು ಪ್ರೈಮರಿ ಸ್ಕೂಲ್. ಆಗ ನಮ್ಮೂರಿನಲ್ಲಿ ಮೇಸ್ಟ್ರು ಶಂಕರ ನಾರಾಯಣ ಜೋಯಿಸ್ ಎಂಬವರಿದ್ದರು. ಇಡೀ ನಮ್ಮೂರಿನಲ್ಲಿ ಇದ್ದದ್ದು ಇವರೊಬ್ಬರದ್ದೆ ಬ್ರಾಹ್ಮಣ ಕುಟುಂಬ. ಬಹಳ ಸಾತ್ವಿಕ ಮನಸ್ಸಿನ, ಮೆಲು ಮಾತಿನ ಮೇಸ್ಟ್ರ ಕುಟುಂಬ ಕಂಡ್ರೆ ಊರಿನವರಿಗೆಲ್ಲ ಪ್ರೀತಿ. ಅವರಿಗೆ ಇಬ್ಬರು ಹೆಣ್ಣು ಸೇರಿ ಮೂವರು ಮಕ್ಕಳು. ಅದರಲ್ಲಿ ಇಬ್ಬರು ನನ್ನ ಸಹೋದರಿಯರ ಕ್ಲಾಸ್ ಮೆಟ್.
ಸ್ಕೂಲ್ ನಿಂದ ಬಂದರೆ ನಮ್ಮನೆ ಕಾಂಪೌಂಡ್ ಆವರಣವೇ ನಮಗೆಲ್ಲ ಆಟದ ಮೈದಾನ. ಕುಂಟೆಪಿಲ್ಲೆ, ಕಣ್ಣಾ-ಮುಚ್ಚಾಲೆ(ಔತಗುಮ್ಮ), ಲಗೋರಿ, ಗೋಲಿಯಾಟ... ಹೀಗೆ ಗ್ರಾಮೀಣ ಕಲೆ ಆಟದಲ್ಲಿ ಎಲ್ಲರೂ ಕಲೆತು ಆಡುತ್ತಿದ್ದ ದಿನಗಳನ್ನು ಮರೆಯಲಾಗದು. ಇಂಥ ಅದೆಷ್ಟೋ ನೆನಪುಗಳು ಎದೆಯಲ್ಲಿ ಇನ್ನೂ ಹಸಿಹಸಿಯಾಗಿವೆ. ಎಷ್ಟೇ ಆದರೂ ಬಾಲ್ಯದ ನೆನಪುಗಳಲ್ಲವೇ!
ಎಂಟತ್ತು ವರ್ಷ ನಮ್ಮೂರಲ್ಲಿದ್ದ ಮೇಸ್ಟ್ರು , ನಾವು ನಾಲ್ಕನೇ ತರಗತಿಗೆ ಬಂದಾಗಲೇ ವರ್ಗವಾಗಿ ಬೇರೆ ಶಾಲೆಗೆ ಹೋದರು. ಅಲ್ಲಿಂದ ನಮಗೆ ಲಿಂಕ್ ಕಟ್ ಆಯ್ತು. ಆದರೆ ಅವರು ಹೇಳಿಕೊಟ್ಟ ಅಕ್ಷರ, ಹಾಕಿಕೊಟ್ಟ ವಿದ್ಯೆಯ ತಳಪಾಯ ಮಾತ್ರ ಗಟ್ಟಿಯಾಗಿತ್ತು.
ತಿಪಟೂರು ತಾಲೂಕು ಕೆರಗೋಡಿ ರಂಗಾಪುರ ಬಳಿ ಇದ್ದ ಮನೆಯನ್ನು ಮಾರಿ ಸಂಸಾರ ಸಹಿತ ಖಾಲಿ ಮಾಡಿದವರು ಸಂಪರ್ಕಕ್ಕೆ ಸಿಗಲಿಲ್ಲ. ಮೇಸ್ಟ್ರು ಇದ್ದಾರೋ? ಇಲ್ಲವೋ ? ತಿಳಿಯಲಿಲ್ಲ. ಹಾಗೆ ದಶಕಗಳ ಬಳಿಕ ನಮಗೂ ನೆನಪು ಮಾಸಿ ಹೋಯಿತು.

ನಮ್ಮೂರಿನಲ್ಲಿದ್ದಾಗ ಮೇಸ್ಡ್ರ ಪತ್ನಿ ಶಾರದಂಬ ಹೆಸರಿಗೆ ತಕ್ಕ ಹಾಗೆ ಶಾರದಾಂಬೆಯೇ. ಅಷ್ಟು ನೀಟ್ ಮತ್ತು ಅಚ್ಚುಕಟ್ಟು. ಅವರ ಮಗ ಸ್ವಾಮಿ, ಹೆಣ್ಮಕ್ಕಳಾದ ಲತಾ ಮತ್ತು ಲಕ್ಷ್ಮಿ(ಪುಟ್ಟಿ) ಎಲ್ಲರಿಗೂ ಪುರುದೇಗೌಡರ ಮನೆ (ನಮ್ಮನೆ) ಅಂದರೆ ಅಷ್ಡು ಪ್ರೀತಿ ಮತ್ತು ವಿಶ್ವಾಸ. ಆಟ ಆಡುವುದರಲ್ಲಿ ಅಷ್ಟೇ ಅಲ್ಲ, ಓದುವುದರಲ್ಲೂ ನಮ್ಮ ನಡುವೆಯೇ ಕಾಂಪಿಟೇಷನ್.
ಸೀಮೆಎಣ್ಣೆ ಬುಡ್ಡಿ ಹಿಡಿದು ಅವರ ಮನೆಯಲ್ಲಿ ಓದಲು ಕೂರುತ್ತಿದ್ದ ದಿನಗಳನ್ನು ಮರೆಯಲಾಗದು. ಒಂದೊಂದು ದಿನ ಒಬ್ಬೊಬ್ಬರದ್ದು ಸೀಮೆಎಣ್ಣೆ ಬುಡ್ಡಿ ತರುವ ಕೆಲಸ ರೊಟೇಷನ್ ಪ್ರಕಾರ ನಡೆಯುತಿತ್ತು. ಊರೊಳಗಿದ್ದ ನಮ್ಮ ನಾಡಂಚಿನ ಹಳೆ ಮನೆಯೇ ಮೇಸ್ಟ್ರ ಕುಟುಂಬದ ಕ್ವಾಟ್ರಸ್ ಆಗಿತ್ತು.
ಎಲ್ಲವೂ ಮರೆತು ಹೋದ ಮೇಲೆ, ನಲವತ್ತಾನಾಲ್ಕು ವರ್ಷಗಳ ಬಳಿಕ ಮೊನ್ನೆ ಒಂದು ಪೋನ್ ಕರೆ ಬಂತು. ನಾನು ಮಾಮೂಲಿ ಪೋನ್‌ನಂತೆ ಯಾರು ಎಂದೆ.
ನಾನು, ಶಂಕರನಾರಾಯಣ ಮೇಸ್ಡ್ರ ಮಗಳು ಲತಾ ಎಂದು ಪರಿಚಯಿಸಿಕೊಂಡು, ನೀವು ಆನಂದ ಅಲ್ವಾ? ಎಂದರು. ಹೌದು ಎಂದೆ. ನಾನು ನಿಮ್ಮ ಪೋನ್ ನಂಬರ್ ಪಡೆಯಲು ಬಹಳ ಕಷ್ಟಪಟ್ಟೆ ಗೊತ್ತಾ? ನಿಮ್ಮನ್ನ ರೇಸ್ ಬುಕ್‌ನಲ್ಲಿ ನೋಡಿ ಖುಷಿಪಟ್ಟೆ. ನನ್ನ ಮಗನ ಮದುವೆಗೆ ಬರಬೇಕು ಎಂದು ಆಹ್ವಾನವಿತ್ತರು. ಆಗ ನನಗಾದ ಸಂತೋಷ ಅಷ್ಟಿಷ್ಟಲ್ಲ.
ಲತಾ ಅವರಿಂದಾಗಿ ಅವರ ತಾಯಿ ಶಾರದಾಂಬ ಸಂಪರ್ಕ ಸಿಕ್ಕಿತು. ಸ್ವಾಮಿ, ಪುಟ್ಟಿ ಎಲ್ಲರೂ ಸಂಪರ್ಕಕ್ಕೆ ಬಂದು ಮಾತನಾಡಿ ಹಳೆಯ ನೆನಪು ಮೆಲುಕು ಹಾಕಿದರು. ಎಷ್ಡು ಮಾತನಾಡಿದರೂ ಅದು ಮುಗಿಯುವುದಿಲ್ಲ.... ಮುಗಿಯದು.
ಮೊನ್ನೆ ಮೈಸೂರು ಬಸವ ಜಯಂತಿ ಕಾರ್ಯಕ್ರಮಕ್ಕೆ ಕುಟುಂಬ ಸಹಿತ ಹೋಗಿದ್ದೆ. ಮೇಸ್ಟರ್ ಪತ್ನಿ ಶಾರದಾಂಬ ಅವರು, ಮಗನ ಕಡೆಯಿಂದ ಪೋನ್ ಮಾಡಿಸುತ್ತಲೇ ಇದ್ದರು. ಅಮ್ಮ ನಿಮ್ಮನ್ನು ನೋಡಬೇಕಂತಿದ್ದಾರೆ ಬನ್ನಿ ಎಂದು.
ಬಸವ ಜಯಂತಿ ಮುಗಿಸಿ ರಾತ್ರಿ ಮೈಸೂರಿನಲ್ಲಿ ಅವರ ಮನೆ ಹುಡುಕಿ ಹೋದೆ. 82ವರ್ಷ ತುಂಬಿದ ಹಿರಿಯ ಜೀವ ಶಾರದಾಂಬ ಬಾಗಿಲಲ್ಲೆ ಕಾಯುತ್ತಾ ಕೂತಿದ್ದರು. 44 ವರ್ಷಗಳ ಬಳಿಕ ಭೇಟಿ... ನೀವೆ ಲೆಕ್ಕ ಹಾಕಿ ಹೇಗಾಗಿರಬೇಡ? ನಿಜ ತಕ್ಷಣಕ್ಕೆ ಮಾತು ಬರಲಿಲ್ಲ.
ಅವರು ಬಾಯಿ ತುಂಬ ಆನಂದ... ಆನಂದ... (ಊರಲ್ಲಿ ಶಿವಾನಂದ ಎನ್ನುವುದು ಕಡಿಮೆ. ಆನಂದ ಎಂದು ಕರೆಯುವುದೇ ಹೆಚ್ಚು)ಎಂದು ಕೈಹಿಡಿದು ಮೈದಡವಿ ಮುದ್ದಾಡಿ ಮನಸ್ಸು ತುಂಬಿಕೊಂಡರು. ಮನೆಗೆ ವಿವಿಐಪಿ ಗೆಸ್ಟ್ ಬಂದ ರೀತಿ, ಅವರ ಮನೆಯಲ್ಲಿ ಸಂಭ್ರಮ...
ನಾನು ಮತ್ತು ನನ್ನ ಮನೆಯವಳು ಶಾರದಾಂಬ ಅವರಿಗೆ ಶಾಲು ಹೊದಿಸಿ ಗೌರವಿಸಿ ಕಣ್ತುಂಬಿಕೊಂಡೆವು. ಆ ಕ್ಷಣಗಳಿಗೆ ಬೆಲೆ ಕಟ್ಟಲಾಗದು. ನನ್ನ ಮಗಳು ಪಟಾಪಟಾಂತ ಒಂದಷ್ಡು ಪೋಟೋ ತೆಗೆದಳು. ಅವರ ಮನೆಯಿಂದ ಭಾರವಾದ ನೆನಪುಗಳ ಮೂಟೆ ಹೊತ್ತು ಒಲ್ಲದ ಮನಸ್ಸಿನಿಂದಲೇ ಹೊರಟೆವು.
ನಮಗೆ ಪಾಠ ಹೇಳಿಕೊಟ್ಟ ಮೇಸ್ಡ್ರು ಶಂಕರ ನಾರಾಯಣ ಅವರು ಬದುಕಿದ್ದರೆ... ಎಷ್ಡು ಖುಷಿ ಪಡುತ್ತಿದ್ದರೋ ಏನೋ!? ಎಂದು ಸುಮ್ಮನೆ ನೆನಪಿಸಿಕೊಂಡೆ. ಅವರ ಮನೆಯಲ್ಲೂ ಅದೇ ಮಾತು. ಆನಂದ ನೀ ಬಂದಾಗ ನಮ್ಮ ಮನೆಯವರು ಬದುಕಿರಬೇಕಿತ್ತು... ಎಂದು ಶಾರದಾಂಬ ಕೂಡ ನೆನಪಿಸಿಕೊಂಡು ಮರುಗಿದರು.
ಮೇಸ್ಟ್ರು ಮಕ್ಕಳು, ತಾಯಿ ಶಾರದಾಂಬ ಅವರ ಜೊತೆಗೆ ಮೈಸೂರಿನಲ್ಲಿ ತುಂಬು ಬದುಕು ನಡೆಸುತ್ತಿದ್ದಾರೆ. ಅಷ್ಡ್ರರ ಮಟ್ಟಿಗೆ ಖುಷಿ ಅನ್ನಿಸಿತು. ಯಾವ ಜನ್ಮದ ಋಣಾನುಬಂಧವೋ!?
ಲೇಖನ-ಶಿವಾನಂದ ತಗಡೂರು, ಬೆಂಗಳೂರು.


