ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯಶಸ್ವಿ ಸಾರ್ವಜನಿಕ ಸೇವೆ ಮತ್ತು ಸಮರ್ಥ ನಾಯಕತ್ವದ ಮೂಲಕ 25 ವೈಭವಯುತ ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದಿಂದ ಹಮ್ಮಿಕೊಳ್ಳಲಾದ 'ಸೇವಾ ಸಂಕಲ್ಪ ಅಭಿಯಾನ'ದ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರನ್ನು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ಮಾಡಿ ಮಾತುಕತೆ ನಡೆಸಿದರು.
ಪ್ರಧಾನಿಯವರ ವಿಕಸಿತ ಭಾರತದ ಕನಸಿಗೆ ಅನುಗುಣವಾಗಿ, ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹಗಲಿರುಳು ಶ್ರಮಿಸುತ್ತಿರುವ ಕೇಂದ್ರ ಸಚಿವ ಅಮಿತ್ ಶಾ ಅವರ ದೃಢ ನಾಯಕತ್ವ ಎಲ್ಲರಿಗೂ ಸದಾ ಸ್ಪೂರ್ತಿದಾಯಕವಾಗಿದೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.
ಬಳ್ಳಾರಿ ಚಲೋ ಯಶಸ್ಸಿನ ವಿವರ ಸಲ್ಲಿಕೆ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ಜನವಿರೋಧಿ ನೀತಿಗಳ ವಿರುದ್ಧ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಬಳ್ಳಾರಿ ಚಲೋ' ಪಾದಯಾತ್ರೆಯ ಅಭೂತಪೂರ್ವ ಯಶಸ್ಸಿನ ಸಂಪೂರ್ಣ ವಿವರಗಳನ್ನು ಅಮಿತ್ ಶಾ ಅವರ ಗಮನಕ್ಕೆ ತರಲಾಯಿತು. ಈ ಸುದೀರ್ಘ ಯಾತ್ರೆಯುದ್ಧಕ್ಕೂ ಅಸಂಖ್ಯಾತ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರಿಂದ ವ್ಯಕ್ತವಾದ ಅಭೂತಪೂರ್ವ ಬೆಂಬಲದ ಚಿತ್ರಣವನ್ನು ಅವರೊಂದಿಗೆ ಹಂಚಿಕೊಳ್ಳಲಾಯಿತು.
ಮುಂದಿನ ಹೋರಾಟಕ್ಕೆ ಮಾರ್ಗದರ್ಶನ: ಭ್ರಷ್ಟ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಮುಂದಿನ ದಿನಗಳಲ್ಲಿ ಜನರ ಮುಂದಿಟ್ಟು, ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಕುರಿತು ಅಮಿತ್ ಶಾ ಅವರಿಂದ ಅಮೂಲ್ಯ ಮಾರ್ಗದರ್ಶನ ಪಡೆಯಲಾಯಿತು.
ಸಂಘಟನಾತ್ಮಕ ಕಾರ್ಯಗಳಿಗೆ ಮೆಚ್ಚುಗೆ: 'ಬಳ್ಳಾರಿ ಚಲೋ' ಸೇರಿದಂತೆ ರಾಜ್ಯದಲ್ಲಿ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳು ಹಾಗೂಆಹ್ವಾನಿತರುಗಳನ್ನು ಅಮಿತ್ ಶಾ ಅವರು ಶ್ಲಾಘಿಸಿದರು.
2028ಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವ ಗುರಿ: ರಾಜ್ಯದಲ್ಲಿ ಮುಂಬರುವ 2028ರಲ್ಲಿ ಜನಪರವಾದ ಬಿಜೆಪಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವ ಗುರಿಯೊಂದಿಗೆ ನಮ್ಮ ಸಂಘಟಿತ ಹೋರಾಟ ಮತ್ತು ಜನಜಾಗೃತಿ ಅಭಿಯಾನಗಳು ನಿರಂತರವಾಗಿ ಮುಂದುವರಿಯಲಿವೆ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.
ಕೇಂದ್ರ ಸಚಿವ ಅಮಿತ್ ಶಾ ಹಾಗೂ ಹಿರಿಯ ನಾಯಕರ ಮಾರ್ಗದರ್ಶನ ಮತ್ತು ಬೆಂಬಲವೇ ನಮ್ಮ ನಿಜವಾದ ಬಲವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.




