ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕಿನಲ್ಲಿ ಪ್ರಮುಖ ಪ್ರವಾಸ ಕೈಗೊಂಡಿರುವ ಪೌರಾಡಳಿತ ಹಾಗೂ ಹಜ್ ಸಚಿವರಾದ ಹೆಚ್.ಸಿ. ಬಾಲಕೃಷ್ಣ ಅವರು, ಹರಿಯಬ್ಬೆ, ಹರಿಯಬ್ಬೆ ಪಾಳ್ಯ, ಸಕ್ಕರ ಹಾಗೂ ಪಿ.ಡಿ. ಕೋಟೆ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.
ಅಜ್ಜಿಕಟ್ಟೆ ಕೆರೆ ವೀಕ್ಷಣೆ: ಹರಿಯಬ್ಬೆ ಹಾಗೂ ಹರಿಯಬ್ಬೆ ಪಾಳ್ಯ ಗ್ರಾಮಗಳ ಕುಡಿಯುವ ನೀರಿನ ಪ್ರಮುಖ ಆಸರೆಯಾಗಿರುವ ಅಜ್ಜಿಕಟ್ಟೆ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಕೆರೆಯ ಪ್ರಸ್ತುತ ಸ್ಥಿತಿ ಮತ್ತು ನೀರಿನ ಲಭ್ಯತೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಗ್ರಾಮಸ್ಥರಿಗೆ ಯಾವುದೇ ಕುಡಿಯುವ ನೀರಿನ ತೊಂದರೆಯಾಗದಂತೆ ತುರ್ತು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಸಾರ್ವಜನಿಕರ ಸಂವಾದ ಮತ್ತು ಮನವಿ ಸ್ವೀಕಾರ: ಸಕ್ಕರ ಮತ್ತು ಪಿ.ಡಿ. ಕೋಟೆ ಗ್ರಾಮಗಳಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರೊಂದಿಗೆ ಸಭೆ ನಡೆಸಿ, ಸ್ಥಳೀಯ ಸಮಸ್ಯೆಗಳು ಮತ್ತು ಬೇಡಿಕೆಗಳ ಮನವಿಗಳನ್ನು ಸ್ವೀಕರಿಸಿದರು. ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವುದಾಗಿ ಭರವಸೆ ನೀಡಿದರು.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ಮುಖಂಡರಾದ ಸುಹಾಸ್ ಸುಧಾಕರ್, ಬಿ.ಎಚ್. ಮಂಜುನಾಥ್, ಮಹಾಂತೇಶ್ ಅಭಿಮಾನಿಗಳ ಮುಖಂಡರು, ಸ್ಥಳೀಯ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.




