ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಡದಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಟೌನ್‌ಶಿಪ್ ಯೋಜನೆಗೆ ಜನತಾದಳ (ಜಾತ್ಯತೀತ) ಪಕ್ಷವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಜೆಡಿಎಸ್ ನೇರ ವಾಗ್ದಾಳಿ ನಡೆಸಿದೆ.
ಬಂಗಾರದ ಬೆಳೆ ಬೆಳೆಯುವ ಭೂಮಿ:
"ಬಿಡದಿ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಬಂಗಾರದ ಬೆಳೆ ಬೆಳೆಯುವ ಇಂತಹ ಫಲವತ್ತಾದ ರೈತರ ಜಮೀನು ನಿಮಗೆ ಬೇಕೆ ಡಿ.ಕೆ ಶಿವಕುಮಾರ್?" ಎಂದು ಜೆಡಿಎಸ್ ಪ್ರಶ್ನಿಸಿದೆ. ಅತ್ಯಂತ ಫಲವತ್ತಾದ, ಹಸಿರಿನಿಂದ ಕಂಗೊಳಿಸುತ್ತಿರುವ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಹೊರಟಿರುವ ಸರ್ಕಾರದ ನೀತಿಯನ್ನು ಪಕ್ಷವು ತೀವ್ರವಾಗಿ ಖಂಡಿಸಿದೆ.
ಅನ್ನದಾತರ ಸಮಾಧಿ ಮೇಲೆ ಟೌನ್‌ಶಿಪ್?
ರಾಜ್ಯ ಸರ್ಕಾರದ ವಿರುದ್ಧ ತೀಕ್ಷ್ಣ ಪದಗಳಿಂದ ಹರಿಹಾಯ್ದಿರುವ ಜೆಡಿಎಸ್, "ಅನ್ನದಾತರ ಸಮಾಧಿ ಮೇಲೆ ಟೌನ್‌ಶಿಪ್‌ಕಟ್ಟಲು ಹೊರಟಿರುವುದು ಯಾವ ಪುರುಷಾರ್ಥಕ್ಕೆ?" ಎಂದು ಪ್ರಶ್ನಿಸಿದೆ. ರೈತರ ಹಿತ ಕಾಯಬೇಕಾದ ಸರ್ಕಾರವೇ ಅವರನ್ನು ಬೀದಿಗೆ ತಳ್ಳಲು ಮುಂದಾಗಿದೆ ಎಂದು ಆರೋಪಿಸಿದೆ.
ಯೋಜನೆ ಕೈಬಿಡಲು ಆಗ್ರಹ:
ಕೋಟಿಗಟ್ಟಲೆ ಜನರಿಗೆ ಅನ್ನ ನೀಡುವ ರೈತರನ್ನು ಯಾವುದೇ ಕಾರಣಕ್ಕೂ ಅವರ ಸ್ವಂತ ಭೂಮಿಯಿಂದ ಒಕ್ಕಲೆಬ್ಬಿಸಬಾರದು ಎಂದು ಆಗ್ರಹಿಸಿರುವ ಜೆಡಿಎಸ್, ತಕ್ಷಣವೇ ಈ ಉದ್ದೇಶಿತ ಟೌನ್‌ಶಿಪ್ ಯೋಜನೆಯನ್ನು ಕೈಬಿಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದೆ. ಬಿಡದಿ ಭಾಗದ ರೈತರ ಕೃಷಿ ಭೂಮಿ ಉಳಿಸಲು ಹೋರಾಟದ ಮುನ್ಸೂಚನೆಯನ್ನು ಪಕ್ಷ ನೀಡಿದೆ.



