ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇತ್ತೀಚಿಗೆ ಮುಕ್ತಾಯಗೊಂಡ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ (ಕ್ರಾಸ್ ವೋಟಿಂಗ್) ಆಘಾತದಿಂದ ಕಂಗೆಟ್ಟು, ತಪ್ಪಿತಸ್ಥರನ್ನು ಪತ್ತೆಹಚ್ಚಲು 'ಆಣೆ-ಪ್ರಮಾಣ'ದ ಮೊರೆ ಹೋಗಿರುವ ರಾಜ್ಯ ಬಿಜೆಪಿಗೆ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಬಿಗ್ ಶಾಕ್ ನೀಡಿದ್ದಾರೆ. ಪಕ್ಷದೊಳಗಿನ 'ವಿಶ್ವಾಸ ದ್ರೋಹಿ'ಗಳನ್ನು ಪತ್ತೆಹಚ್ಚುವ ವಿಚಾರದಲ್ಲಿ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಉಲ್ಬಣಗೊಂಡಿರುವ ಬೆನ್ನಲ್ಲೇ, ಸದಾನಂದಗೌಡರು ತೆರೆಮರೆಯಲ್ಲಿ ನಡೆದ 'ರಹಸ್ಯ ಅಪಾರ್ಟ್‌ಮೆಂಟ್ ಸಭೆ'ಗಳ ಕುರಿತು ಅತ್ಯಂತ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.
ಪಕ್ಷದ ರಾಜ್ಯ ನಾಯಕರ ಉದಾಸೀನತೆ ಹಾಗೂ ಬೇಜವಾಬ್ದಾರಿತನವೇ ಕಾಂಗ್ರೆಸ್‌ನ 5ನೇ ಅಭ್ಯರ್ಥಿಯ ಸುಲಭ ಗೆಲುವಿಗೆ ನೇರ ಕಾರಣ ಎಂದು ಡಿವಿಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಬ್ಬಾಳದ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿತ್ತು ಹೈ-ವೋಲ್ಟೇಜ್ ಸಭೆ!:
ರಾಜಕೀಯ ಆಪರೇಷನ್‌ನ ಒಳಗುಟ್ಟುಗಳನ್ನು ಬಿಚ್ಚಿಟ್ಟ ಡಿ.ವಿ. ಸದಾನಂದಗೌಡರು, "ಕಾಂಗ್ರೆಸ್ ತನ್ನ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದಾಗಲೇ ನಮ್ಮ ನಾಯಕರು ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ ಆಡಳಿತ ಮಂಡಳಿ ಸಂಪೂರ್ಣ ವಿಫಲವಾಯಿತು" ಎಂದು ಚಾಟಿ ಬೀಸಿದ್ದಾರೆ. ತಮಗೆ ಸಿಕ್ಕಿದ್ದ ರಹಸ್ಯ ಮಾಹಿತಿಯ ಬಗ್ಗೆ ಅವರು ಹೀಗೆ ವಿವರಿಸಿದ್ದಾರೆ.
ಮೊದಲ ಸಭೆ: "ಜೂನ್ 13 ರಂದು ಹೆಬ್ಬಾಳದ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಿಂದ ನನಗೆ ಒಂದು ಕರೆ ಬಂದಿತ್ತು. ಕಾಂಗ್ರೆಸ್‌ನ ನಾಲ್ಕು ಪ್ರಮುಖ ನಾಯಕರು ಮತ್ತು ಬಿಜೆಪಿಯ ಕೆಲ ಶಾಸಕರು ಅಲ್ಲಿ ರಹಸ್ಯ ಸಭೆ ನಡೆಸುತ್ತಿದ್ದಾರೆ ಎಂದು ಆ ವ್ಯಕ್ತಿ ಖಚಿತ ಮಾಹಿತಿ ನೀಡಿದ. ನಾನು ತಕ್ಷಣವೇ ಅಲರ್ಟ್ ಆಗಿ ನಮ್ಮ ಪಕ್ಷದ ರಾಜ್ಯಾಧ್ಯಕ್ಷರಿಗೆ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರಿಗೆ ಕರೆ ಮಾಡಿದೆ. ಆದರೆ ಇಬ್ಬರೂ ಸಂಪರ್ಕಕ್ಕೆ ಸಿಗಲಿಲ್ಲ. ಬಳಿಕ ರಾಜ್ಯ ಪ್ರಧಾನ ಕಾರ್ಯದರ್ಶಿಯೊಬ್ಬರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದೆ. ಅವರು 'ಸರಿ ನೋಡ್ತೇನೆ' ಎಂದು ಹಗುರವಾಗಿ ತೆಗೆದುಕೊಂಡರು."
ಎರಡನೇ ಸಭೆ: "ನಮ್ಮ ನಾಯಕರ ಉದಾಸೀನತೆಯ ಲಾಭ ಪಡೆದ ವಿಪಕ್ಷಗಳು, ಮರುದಿನವೇ ಅದೇ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್ ಪಕ್ಕದ ಮತ್ತೊಂದು ಕಟ್ಟಡದಲ್ಲಿ ಎರಡನೇ ಸುತ್ತಿನ ಸಭೆ ನಡೆಸಿದವು. ಆಗಲೂ ನಾನು ಅದೇ ಪ್ರಧಾನ ಕಾರ್ಯದರ್ಶಿಗೆ ಕರೆ ಮಾಡಿ ಎಚ್ಚರಿಸಿದರೂ ನಮ್ಮ ಕಡೆಯಿಂದ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿಲ್ಲ."
"ಹೊಳೆ ದಾಟಿದ ಮೇಲೆ ಮತ್ತೇನು ಚರ್ಚೆ?":
ಅಡ್ಡಮತದಾನ ನಡೆದು ಬಿಜೆಪಿಗೆ ಭಾರಿ ಮುಖಭಂಗವಾದ ಮೇಲೆ, ಅದೇ ಪ್ರಧಾನ ಕಾರ್ಯದರ್ಶಿ ಡಿವಿಎಸ್ ಅವರಿಗೆ ಕರೆ ಮಾಡಿ, "ಅಣ್ಣ ನೀವು ಹೇಳಿದ ಹಾಗೆಯೇ ಆಯ್ತಲ್ಲ!" ಎಂದಿದ್ದರಂತೆ. ಅದಕ್ಕೆ ಸದಾನಂದ ಗೌಡರು, "ಎಲ್ಲಾ ಮುಗಿದು ಹೊಳೆ ದಾಟಿದ ಮೇಲೆ ಈಗ ಮತ್ತೇನು ಚರ್ಚೆ?" ಎಂದು ಬೇಸರದಿಂದಲೇ ಫೋನ್ ಕಟ್ ಮಾಡಿದ್ದಾರೆ.
ದೇವರ ಹತ್ತಿರ ರಾಜಕೀಯ ಬೇಡ: 'ಆಣೆ-ಪ್ರಮಾಣ'ಕ್ಕೆ ತೀವ್ರ ಆಕ್ಷೇಪ!:
ಅಡ್ಡಮತದಾನ ಮಾಡಿದವರನ್ನು ಪತ್ತೆಹಚ್ಚಲು ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿಸಲು ಮುಂದಾಗಿರುವ ರಾಜ್ಯ ನಾಯಕರ ನಡೆಗೆ ಮಾಜಿ ಸಿಎಂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ರಾಜ್ಯಾಧ್ಯಕ್ಷರಿಗೆ ನೇರವಾಗಿ ತರಾಟೆಗೆ ತೆಗೆದುಕೊಂಡಿರುವುದಾಗಿ ಹೇಳಿದ ಅವರು, "ಯಾವುದೇ ಕಾರಣಕ್ಕೂ ಪವಿತ್ರ ಧರ್ಮ ಕ್ಷೇತ್ರಗಳಿಗೆ ರಾಜಕೀಯವನ್ನು ಎಳೆದು ತರಬೇಡಿ. ದೇವರ ಹತ್ತಿರವೂ ರಾಜಕೀಯ ಮಾಡುವುದಾದರೆ ಎಲ್ಲವನ್ನೂ ದೇವರಿಗೇ ಬಿಟ್ಟುಬಿಡಿ. ನಮ್ಮಿಂದ ರಾಜಕೀಯ ಮಾಡಲು ಸಾಧ್ಯವಾಗದಿದ್ದರೆ ದೇವರೇ ರಾಜಕೀಯ ಮಾಡಲಿ, ನಾವೇಕೆ ಇರಬೇಕು?" ಎಂದು ವ್ಯಂಗ್ಯವಾಡಿದ್ದಾರೆ.
ಡಿ.ವಿ. ಸದಾನಂದಗೌಡರ ಈ ನಡೆ ರಾಜ್ಯ ಬಿಜೆಪಿಯಲ್ಲಿ ಆಂತರಿಕ ಬಿರುಗಾಳಿ ಎಬ್ಬಿಸಿದ್ದು, ನಾಯಕರ ನಡುವಿನ ಸಮನ್ವಯತೆಯ ಕೊರತೆಯನ್ನು ಸಾರ್ವಜನಿಕವಾಗಿ ಅನಾವರಣಗೊಳಿಸಿದೆ.



