ಚಂದ್ರವಳ್ಳಿ ನ್ಯೂಸ್, ಭದ್ರಾವತಿ:
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಡಿಜಿಎಂ ಗೋವಿಂದರಾಜು (54) ಅವರು ತಮ್ಮ ವಸತಿ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ವರದಿಯಾಗಿದೆ.
ಮೂಲತಃ ತಮಿಳುನಾಡಿನ ಸೇಲಂ ಜಿಲ್ಲೆಯವರಾದ ಗೋವಿಂದರಾಜು ಅವರು ಕಳೆದ ಎಂಟು ವರ್ಷಗಳಿಂದ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಡಿಜಿಎಂ ಆಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಕುಟುಂಬವು ಸೇಲಂನಲ್ಲಿಯೇ ನೆಲೆಸಿದೆ.
ಘಟನೆಯ ವಿವರ: ಮೃತ ಗೋವಿಂದರಾಜು ಅವರ ಪತ್ನಿ ಎರಡು ದಿನಗಳ ಹಿಂದೆ ಭದ್ರಾವತಿಗೆ ಬಂದಿದ್ದರು. ಭಾನುವಾರ ಮಧ್ಯಾಹ್ನ 3 ಗಂಟೆಗೆ ಪತ್ನಿಯನ್ನು ರೈಲಿಗೆ ಹತ್ತಿಸಿ ಕಳುಹಿಸಿದ್ದ ಗೋವಿಂದರಾಜು, ಬಳಿಕ ರಾತ್ರಿ ಮನೆಗೆ ವಾಪಸಾಗಿದ್ದರು. ಸೋಮವಾರ ಬೆಳಿಗ್ಗೆ ಪೇಪರ್ ಹಾಕಲು ಬಂದ ಪೇಪರ್ ಬಾಯ್ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಸಂಶಯಗೊಂಡು ಕಾರ್ಖಾನೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಬಂದು ಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಮಾಹಿತಿ ತಿಳಿದ ಕೂಡಲೇ ನ್ಯೂಟೌನ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರ ಪ್ರತಿಕ್ರಿಯೆ: "ಗೋವಿಂದರಾಜು ಅವರ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಅವರ ಕುಟುಂಬದವರು ಸೇಲಂನಿಂದ ಹೊರಟಿದ್ದು, ಅವರಿಗಾಗಿ ಕಾಯುತ್ತಿದ್ದೇವೆ. ಕುಟುಂಬಸ್ಥರು ಬಂದ ನಂತರ ಮೃತದೇಹವನ್ನು ಕೆಳಗೆ ಇಳಿಸಿ, ಮರಣೋತ್ತರ ಪರೀಕ್ಷೆ ನಡೆಸಲಾಗುವುದು" ಎಂದು ನ್ಯೂ ಟೌನ್ ಪೊಲೀಸ್ ಠಾಣೆಯ ಪಿಎಸ್ಐ ಮಾಹಿತಿ ನೀಡಿದ್ದಾರೆ.




