ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಭದ್ರಾ ಮೇಲ್ದಂಡೆ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿ 10 ದಿನಗಳು ಕಳೆದರೂ ಹೊಳಲ್ಕೆರೆ ತಾಲೂಕಿನ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯ ರೈತರು, ತಕ್ಷಣವೇ ಎಲ್ಲಾ ಕೆರೆಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿ ಪಟ್ಟಣದ ಪಂಪ್‌ಹೌಸ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಯೋಜನೆಯಡಿ ತಾಲೂಕಿನ 25 ಕೆರೆಗಳನ್ನು ತುಂಬಿಸುವುದಾಗಿ ಸರ್ಕಾರ ಹಾಗೂ ಜನಪ್ರತಿನಿಧಿಗಳು ಭರವಸೆ ನೀಡಿದ್ದರು. ಆದರೆ ಚಾನಲ್‌ಗೆ ನೀರು ಬಿಟ್ಟು ದಿನಗಳು ಕಳೆದರೂ ಯಾವುದೇ ಕೆರೆಗೆ ನೀರು ತಲುಪಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಸಂಬಂಧಪಟ್ಟ ಇಂಜಿನಿಯರ್‌ಗಳು ಸರಿಯಾದ ಉತ್ತರ ನೀಡದೆ ಜಾರಿಕೊಳ್ಳುತ್ತಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದರು.
ಇನ್ನು ಒಂದು ವಾರದೊಳಗೆ ಹೊಳಲ್ಕೆರೆ ಪಟ್ಟಣ ಸೇರಿದಂತೆ ಯೋಜನಾ ವ್ಯಾಪ್ತಿಯ ಎಲ್ಲಾ ಕೆರೆಗಳನ್ನು ಭರ್ತಿ ಮಾಡಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದ ಪ್ರತಿಭಟನಾಕಾರರು, ಬುಧವಾರ ತಾಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಸುರೇಶ್, ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಆರ್. ರಾಜಪ್ಪ, ಟಿಎಪಿಸಿಎಂಎಸ್ ಡೈರೆಕ್ಟರ್ ಈಶ್ವರಪ್ಪ, ಪ.ಪಂ ಮಾಜಿ ಅಧ್ಯಕ್ಷ ಜಗದೀಶ್ ನಾಡಿಗ್, ಚಿದಾನಂದ, ಪುರಸಭೆ ಮಾಜಿ ಸದಸ್ಯ ಡಿ.ಎಸ್. ವಿಜಯ್, ರೈತ ಸಂಘದ ನಗರ ಘಟಕದ ಮಾಜಿ ಅಧ್ಯಕ್ಷ ಲೋಕೇಶ್, ಕುಮಾರಣ್ಣ, ರೈತ ಮುಖಂಡರಾದ ಗಿರೀಶ್, ನವೀನ್ ಹಾಗೂ ತಾಲೂಕಿನ ವಿವಿಧ ಹಳ್ಳಿಗಳ ನೂರಾರು ರೈತರು ಭಾಗವಹಿಸಿದ್ದರು.
ಹೊಳಲ್ಕೆರೆಗೆ ತೀವ್ರ ಅನ್ಯಾಯ:
"ಹೊಳಲ್ಕೆರೆ ತಾಲೂಕಿಗೆ ಅನ್ಯಾಯವಾಗಿದೆ. ಸ್ಥಳೀಯ ಶಾಸಕರು ಸುಳ್ಳು ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಜಿಲ್ಲೆಯ ಇತರೆ ಕೆರೆಗಳಿಗೆ ನೀರು ಧುಮ್ಮಿಕ್ಕಿ ಹರಿಯುತ್ತಿದ್ದರೂ, ಹೊಳಲ್ಕೆರೆ ತಾಲೂಕಿನ ಕೆರೆಗಳು ಮಾತ್ರ ಒಣಗುತ್ತಿವೆ."
ಎ. ಚಿತ್ತಪ್ಪ, ರೈತರು.
ಕುಡಿಯುವ ನೀರು ಹಾಗೂ ಕೃಷಿಗೆ ಆಸರೆ:
"ಪಟ್ಟಣದ ಕೆರೆಗಳು ತುಂಬಿದರೆ ಈ ಭಾಗದ ಜನರಿಗೆ ಕುಡಿಯುವ ನೀರು, ಕೃಷಿ ಹಾಗೂ ತೋಟಗಾರಿಕೆಗೆ ಅನುಕೂಲವಾಗಿ ರೈತರಿಗೆ ಆರ್ಥಿಕ ಶಕ್ತಿ ಸಿಗಲಿದೆ. ತಕ್ಷಣವೇ ನೀರು ಹರಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು."
ರಾಜಪ್ಪ, ಅಧ್ಯಕ್ಷರು, ಗಜಾನನ ಸಮಿತಿ, ಹೊಳಲ್ಕೆರೆ.
ಅಸಮರ್ಪಕ ಕಾಮಗಾರಿಯೇ ಕಾರಣ:
"ಕೆರೆಗೆ ನೀರು ಹರಿಸಲು ಅಳವಡಿಸಿರುವ ಪೈಪ್‌ಲೈನ್‌ಗಳಲ್ಲಿ ಸಾಕಷ್ಟು ದೋಷಗಳಿವೆ. ಇಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಸರಿಯಾಗಿ ನಡೆಯದೆ ನೀರು ಹರಿಯುತ್ತಿಲ್ಲ. ತಕ್ಷಣವೇ ಈ ಲೋಪಗಳನ್ನು ಸರಿಪಡಿಸಬೇಕು."
ಎಸ್. ವೇದಮೂರ್ತಿ, ವಕೀಲರು.




