ಚಂದ್ರವಳ್ಳಿ ನ್ಯೂಸ್, ಬಾಗಲಕೋಟೆ:
ಪ್ರತಿಪಕ್ಷ ಬಿಜೆಪಿಯ ಪಾದಯಾತ್ರೆ ವಿರುದ್ಧ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, "ಒಬ್ಬ ನಾಗೇಂದ್ರ ರಾಜೀನಾಮೆ ನೀಡಿದರೆ ಅದಕ್ಕೇಕೆ ಗಾಬರಿ? ನಮ್ಮ ಸರ್ಕಾರದಲ್ಲಿ ಅಂತಹ 100 ನಾಗೇಂದ್ರರನ್ನು ಹುಟ್ಟುಹಾಕುವ ಮತ್ತು ಶಕ್ತಿ ತುಂಬುವ ಸಾಮರ್ಥ್ಯವಿದೆ" ಎಂದು ತಿರುಗೇಟು ನೀಡಿದ್ದಾರೆ.
ಕೂಡಲಸಂಗಮಕ್ಕೆ ಪ್ರವಾಸ ಕೈಗೊಂಡ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಪಾದಯಾತ್ರೆಗೆ ಟಾಂಗ್ ನೀಡಿದರು.
"ವಿರೋಧ ಪಕ್ಷದವರು ನಮ್ಮ ಬಗ್ಗೆ ಅನಗತ್ಯವಾಗಿ ಆತಂಕ ಪಡುವ ಅಗತ್ಯವಿಲ್ಲ. ಅವರ ಯಾತ್ರೆ ನಡೆದಂತೆ ನಮ್ಮ ಸರ್ಕಾರವೂ ತನ್ನದೇ ಆದ ಹಾದಿಯಲ್ಲಿ ಸಾಗಲಿದೆ. ನಾಗೇಂದ್ರ ಅವರು ರಾಜೀನಾಮೆ ನೀಡಿದ ಮಾತ್ರಕ್ಕೆ ಪಕ್ಷಕ್ಕೆ ಹಿನ್ನಡೆಯಾಗುವುದಿಲ್ಲ" ಎಂದು ಸ್ಪಷ್ಟಪಡಿಸಿದರು.‘ಮೋರ್ ಸ್ಟ್ರಾಂಗ್, ಮೋರ್ ಎನಿಮೀಸ್’ಮಾಜಿ ಸಚಿವ ನಾಗೇಂದ್ರ ಅವರ ರಾಜೀನಾಮೆ ವಿಚಾರವನ್ನು ಪ್ರಸ್ತಾಪಿಸಿದ ಅವರು, "ಸದನದ ಕಲಾಪಕ್ಕೆ ಹಾಗೂ ಸರ್ಕಾರಕ್ಕೆ ಮುಜುಗರವಾಗಬಾರದು ಎಂಬ ಉದ್ದೇಶದಿಂದ ‘ನನ್ನಿಂದ ಸದನ ಹಾಳಾಯಿತು’ ಎಂದು ಭಾವಿಸಿ ಅವರು ರಾಜೀನಾಮೆ ನೀಡಿದ್ದಾರೆ. ಯಾರು ಕ್ಷೇತ್ರದಲ್ಲಿ ಹಾಗೂ ಸರ್ಕಾರದಲ್ಲಿ ಧೈರ್ಯವಾಗಿ, ಸಮರ್ಥವಾಗಿ ಕೆಲಸ ಮಾಡುತ್ತಾರೋ ಅವರನ್ನೇ ಗುರಿಯಾಗಿಸುವುದು ಪ್ರತಿಪಕ್ಷಗಳ ಕೆಲಸವಾಗಿದೆ" ಎಂದರು.
ಇದೇ ವೇಳೆ ತಮ್ಮ ನೆಚ್ಚಿನ ಮಾತನ್ನು ನೆನಪಿಸಿದ ಸಿಎಂ, "ನಾನು ಯಾವಾಗಲೂ ಹೇಳುವಂತೆ 'ಮೋರ್ ಸ್ಟ್ರಾಂಗ್, ಮೋರ್ ಎನಿಮೀಸ್' (ನಾವು ಎಷ್ಟು ಗಟ್ಟಿಯಾಗುತ್ತೇವೋ, ಅಷ್ಟು ಶತ್ರುಗಳು ಹೆಚ್ಚಾಗುತ್ತಾರೆ). ಗಟ್ಟಿಯಾಗಿ ಕೆಲಸ ಮಾಡುವವರ ಮೇಲೆಯೇ ಎಲ್ಲರ ಕಣ್ಣು ಬಿದ್ದಿರುತ್ತದೆ. ಆದರೆ, ಇಂತಹ ರಾಜಕೀಯ ತಂತ್ರಗಳಿಗೆ ನಮ್ಮ ಸರ್ಕಾರ ಕಗ್ಗೊಡುವ ಪ್ರಶ್ನೆಯೇ ಇಲ್ಲ" ಎಂದು ಖಡಕ್ ಆಗಿ ಉತ್ತರಿಸಿದರು.




