ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
2026–27ನೇ ಸಾಲಿನ ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕಬಡ್ಡಿ ಪಂದ್ಯಾವಳಿಯಲ್ಲಿ ವಿ.ಪಿ. ಅಕಾಡೆಮಿ ಸಹಯೋಗದ ವೆಸ್ಟರ್ನ್ ಹಿಲ್ಸ್ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಪಂದ್ಯಾವಳಿಯುದ್ದಕ್ಕೂ ವಿದ್ಯಾರ್ಥಿನಿಯರು ತಮ್ಮ ಕ್ರೀಡಾ ಪ್ರತಿಭೆ, ಕಠಿಣ ಪರಿಶ್ರಮ, ಶಿಸ್ತು ಮತ್ತು ತಂಡದ ಮನೋಭಾವವನ್ನು ಪ್ರದರ್ಶಿಸಿ ಗಮನಾರ್ಹ ವಿಜಯ ಸಾಧಿಸಿದ್ದಾರೆ.
ಈ ಮೂಲಕ ತಂಡವು ಸತತ ಎರಡನೇ ಬಾರಿಗೆ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾಗಿದ್ದು, ಕಾಲೇಜಿನ ಕ್ರೀಡಾ ಇತಿಹಾಸದಲ್ಲಿ ಮತ್ತೊಂದು ಹೆಮ್ಮೆಯ ಗರಿಯಾಗಿದೆ.
ಈ ಅಭೂತಪೂರ್ವ ಯಶಸ್ಸಿಗೆ ಕಾರಣರಾದ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರಾದ ದೇವರಾಜ ಎಚ್., ನಿರ್ದೇಶಕರಾದ ಮಂಜುನಾಥ್ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪ್ರಶಂಸಿಸಿ ಅಭಿನಂದಿಸಿದ್ದಾರೆ. ಮುಂಬರುವ ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ ಕಾಲೇಜಿಗೆ ಕೀರ್ತಿ ತರಲಿ ಎಂದು ಹಾರೈಸಿದ್ದಾರೆ.




