ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಧಾನಿಯ ರಸ್ತೆಗಳು ನರಕಸದೃಶವಾಗಿದ್ದು, ಬಿಬಿಎಂಪಿ ಅಧಿಕಾರಿಗಳನ್ನು ಕ್ಯಾಮೆರಾ ಮುಂದೆ ಗದರಿಸಿ ರೀಲ್ಸ್ ಮಾಡುವ ನಾಟಕ ನಿಲ್ಲಿಸಿ, ಮೊದಲು ರಸ್ತೆಗಿಳಿದು ಗುಂಡಿಗಳನ್ನು ಮುಚ್ಚಿಸಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ವಿವಿಧ ಬಡಾವಣೆಗಳ ರಸ್ತೆ ಗುಂಡಿಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜಧಾನಿಯ ರಸ್ತೆಗಳಲ್ಲಿ 'ಗುಂಡಿಗಳದ್ದೇ ದರ್ಬಾರ್'!:
ಬೆಂಗಳೂರಿನ ಇಂದಿನ ದುಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರುವ ಆರ್. ಅಶೋಕ್, ಸಚಿವರಿಗೆ ಕಣ್ಣು ಬಿಟ್ಟು ನೋಡುವಂತೆ ಆಗ್ರಹಿಸಿದ್ದಾರೆ.
"ವಿನಾಯಕ ಲೇಔಟ್ ನಾಗರಭಾವಿ, ಮುದ್ದಿನಪಾಳ್ಯ ರಸ್ತೆ, ಜಯನಗರ 8ನೇ ಬ್ಲಾಕ್... ಹೀಗೆ ರಾಜಧಾನಿಯ ಪ್ರತಿ ರಸ್ತೆಯಲ್ಲೂ ಈಗ 'ಗುಂಡಿಗಳದ್ದೇ ದರ್ಬಾರ್' ನಡೆಯುತ್ತಿದೆ. ಸಾರ್ವಜನಿಕರು ಕಳುಹಿಸಿರುವ ಈ ನರಕಸದೃಶ ರಸ್ತೆಗುಂಡಿಗಳ ಫೋಟೋಗಳನ್ನು ಒಮ್ಮೆ ಕಣ್ಣು ಬಿಟ್ಟು ನೋಡಿ ಸಚಿವರೇ" ಎಂದು ಕಿಡಿಕಾರಿದ್ದಾರೆ.
ಸಿಎಂ ಅಸಲಿ ಬಂಡವಾಳ ಬಯಲು: ಅಶೋಕ್ ಆರೋಪ
ಬೆಂಗಳೂರನ್ನು "Failed Model" ಎಂದು ಕರೆಯುವ ಮೂಲಕ, 'ಬ್ರ್ಯಾಂಡ್ ಬೆಂಗಳೂರು' ನಿರ್ಮಿಸುತ್ತೇವೆ ಎಂದು ಕೊಚ್ಚಿಕೊಳ್ಳುತ್ತಿದ್ದ ಮುಖ್ಯಮಂತ್ರಿಗಳ ಅಸಲಿ ಬಂಡವಾಳವನ್ನು ಸಚಿವರೇ ಬಯಲು ಮಾಡಿದ್ದಾರೆ ಎಂದು ಅಶೋಕ್ ಲೇವಡಿ ಮಾಡಿದ್ದಾರೆ.
"ಬೆಂಗಳೂರಿನ ಇಂದಿನ ದುಸ್ಥಿತಿಗೆ ನೇರ ಹೊಣೆಗಾರರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಎಂದು ಒಪ್ಪಿಕೊಂಡು ನೀವು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದೀರಾ ಕೃಷ್ಣ ಬೈರೇಗೌಡರೇ? ಅಥವಾ ಇದನ್ನು ಸರಿಪಡಿಸಲು ಸಾಧ್ಯವೇ ಇಲ್ಲ ಎಂದು ಕೈಚೆಲ್ಲಿದೀರಾ?" ಎಂದು ಅವರು ಪ್ರಶ್ನಿಸಿದ್ದಾರೆ.
ತೆರಿಗೆ ಬೇಕು, ಸುರಕ್ಷಿತ ರಸ್ತೆ ಕೊಡುವ ಯೋಗ್ಯತೆ ಇಲ್ಲ!:
ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ವಿರೋಧ ಪಕ್ಷದ ನಾಯಕರು, ಸಾರ್ವಜನಿಕರ ಜೀವದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.
ತೆರಿಗೆ ಲೂಟಿ: "ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಬೆಂಗಳೂರಿನ ನಾಗರಿಕರ ತೆರಿಗೆ ಹಣ ಬೇಕು, ಆದರೆ ಅವರಿಗೆ ಸುರಕ್ಷಿತ ರಸ್ತೆ ಕೊಡುವ ಯೋಗ್ಯತೆ ಇಲ್ಲ."
ಜೀವ ಕೈಯಲ್ಲಿ ಹಿಡಿದು ಸಂಚಾರ: "ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ಉಸ್ತುವಾರಿ ಸಚಿವರ ಸಂಪೂರ್ಣ ವೈಫಲ್ಯದಿಂದಾಗಿ ರಾಜಧಾನಿಯ ಜನರು ದಿನನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ."
ರೀಲ್ಸ್ ನಾಟಕ ಸಾಕು ಮಾಡಿ!:
"ಕ್ಯಾಮೆರಾ ಮುಂದೆ ಅಧಿಕಾರಿಗಳನ್ನು ಗದರಿಸಿ ರೀಲ್ಸ್ ಮಾಡುವ ನಾಟಕವನ್ನು ಮೊದಲು ಸಾಕು ಮಾಡಿ. ತಕ್ಷಣವೇ ರಸ್ತೆಗಿಳಿದು ಈ ಮಾರಣಾಂತಿಕ ಗುಂಡಿಗಳನ್ನು ಮುಚ್ಚಿಸಿ. ಇಲ್ಲದಿದ್ದರೆ ಬೆಂಗಳೂರಿನ ಜನತೆ ನಿಮಗೆ ತಕ್ಕ ಪಾಠ ಕಲಿಸುವ ದಿನ ಬಹಳ ದೂರವಿಲ್ಲ" ಎಂದು ಆರ್. ಅಶೋಕ್ ರಾಜ್ಯ ಸರ್ಕಾರಕ್ಕೆ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ.



