ಚಂದ್ರವಳ್ಳಿ ನ್ಯೂಸ್, ನವದೆಹಲಿ:
ದೇಶದ ತೈಲ ರಫ್ತು ಕ್ಷೇತ್ರಕ್ಕೆ ಬೂಸ್ಟರ್ ಡೋಸ್ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ, ಪೆಟ್ರೋಲ್, ಡೀಸೆಲ್ ಹಾಗೂ ವಿಮಾನ ಇಂಧನ ರಫ್ತು ಮೇಲಿನ 'ವಿಂಡ್‌ಫಾಲ್ ಗೇನ್ಸ್ ತೆರಿಗೆ'ಯನ್ನು ಗಮನಾರ್ಹವಾಗಿ ತಗ್ಗಿಸಿದೆ.
ಹಣಕಾಸು ಸಚಿವಾಲಯ ಹೊರಡಿಸಿರುವ ನೂತನ ಅಧಿಸೂಚನೆ ಪ್ರಕಾರ, ಆಗಸ್ಟ್ 14ರಿಂದ ಜಾರಿಗೆ ಬರುವಂತೆ ಮುಂದಿನ 15 ದಿನಗಳ ಅವಧಿಗೆ ಈ ಪರಿಷ್ಕೃತ ದರಗಳು ಅನ್ವಯವಾಗಲಿವೆ.
ಪೆಟ್ರೋಲ್ ರಫ್ತು: ಪೆಟ್ರೋಲ್ ರಫ್ತಿನ ಮೇಲಿದ್ದ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು (SAED) ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಆಗಸ್ಟ್ 3ರಂದು ಲೀಟರ್‌ಗೆ ₹3.50 ಇದ್ದ ಈ ತೆರಿಗೆ ದರವನ್ನು ಈಗ ‘ಶೂನ್ಯ’ (₹0)ಕ್ಕೆ ಇಳಿಸಲಾಗಿದೆ.
ಡೀಸೆಲ್ ರಫ್ತು: ಡೀಸೆಲ್ ಮೇಲಿನ SAED ಅನ್ನು ಪ್ರತಿ ಲೀಟರ್‌ಗೆ ₹25.50 ರಿಂದ ₹24 ಕ್ಕೆ ತಗ್ಗಿಸಲಾಗಿದೆ.
ವಿಮಾನ ಇಂಧನ (ATF): ATF ರಫ್ತಿನ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್‌ಗೆ ₹22 ರಿಂದ ₹19.50 ಕ್ಕೆ ಇಳಿಕೆ ಮಾಡಲಾಗಿದೆ.
ದೇಶೀಯ ಇಂಧನ ದರ ಬದಲಾಗಲ್ಲ:
ರಫ್ತು ತೆರಿಗೆಯಲ್ಲಿ ಕಡಿತ ಮಾಡಲಾಗಿದ್ದರೂ, ದೇಶೀಯ ಮಾರುಕಟ್ಟೆಯಲ್ಲಿ ಸಾರ್ವಜನಿಕರ ಬಳಕೆಗೆ ಲಭ್ಯವಿರುವ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹಾಲಿ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ವಿಂಡ್‌ಫಾಲ್ ತೆರಿಗೆಯ ಹಿನ್ನೆಲೆ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿದ್ದ ಯುದ್ಧ ಹಾಗೂ ಉದ್ವಿಗ್ನತೆಯಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದವು. ಜಾಗತಿಕ ಮಾರುಕಟ್ಟೆಯಲ್ಲಿನ ಹೆಚ್ಚಿನ ಬೆಲೆಯ ಲಾಭ ಪಡೆಯಲು ದೇಶೀಯ ತೈಲ ಕಂಪನಿಗಳು ಹೆಚ್ಚಿನ ಪ್ರಮಾಣದಲ್ಲಿ ಇಂಧನವನ್ನು ರಫ್ತು ಮಾಡುವ ಸಾಧ್ಯತೆಯಿತ್ತು.
ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ಇಂಧನ ಕೊರತೆ ಉಂಟಾಗಬಾರದು ಹಾಗೂ ರಫ್ತುದಾರರ ಅಧಿಕ ಲಾಭಕ್ಕೆ ತಡೆ ಒಡ್ಡಬೇಕು ಎಂಬ ಉದ್ದೇಶದಿಂದ ಸರ್ಕಾರ ಮಾರ್ಚ್ 27ರಂದು ಡೀಸೆಲ್/ATF ಮೇಲೆಯೂ ಮತ್ತು ಮೇ 16ರಿಂದ ಪೆಟ್ರೋಲ್ ಮೇಲೆಯೂ ಈ ತೆರಿಗೆ ವಿಧಿಸಿತ್ತು. ಇದೀಗ ಜಾಗತಿಕ ಮಾರುಕಟ್ಟೆಯ ಸ್ಥಿತಿಗತಿಗಳನ್ನು ಆಧರಿಸಿ ರಫ್ತು ತೆರಿಗೆಯನ್ನು ಕಡಿತಗೊಳಿಸಿರುವುದು ಇಂಧನ ಕ್ಷೇತ್ರಕ್ಕೆ ದೊಡ್ಡ ಸಮಾಧಾನ ತಂದಿದೆ.



