ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಸಾರ್ವಜನಿಕ ನಲ್ಲಿಯಲ್ಲಿ ನೀರು ಹಿಡಿಯಲು ಹೋದ ಮಹಿಳೆಯೊಬ್ಬರು ವಿದ್ಯುತ್ ಸ್ಪರ್ಶಿಸಿ ಅಸಹಜವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶ್ರೀಮತಿ ಜಯಮ್ಮ (45) ಮೃತಪಟ್ಟ ದುರದೃಷ್ಟಕರ ಮಹಿಳೆ. ಗುರುವಾರ ಬೆಳಿಗ್ಗೆ ಸುಮಾರು 10:30ರ ಸುಮಾರಿಗೆ ಮನೆ ಮುಂದಿರುವ ಸಾರ್ವಜನಿಕ ನಲ್ಲಿಯಲ್ಲಿ ನೀರು ಹಿಡಿಯಲು ಹೋದಾಗ, ನಲ್ಲಿಯ ಮೋಟಾರ್ ಪಂಪ್ಗೆ ಸಂಪರ್ಕಿಸಲಾಗಿದ್ದ ವೈರ್ ಶಾರ್ಟ್ ಸರ್ಕ್ಯೂಟ್ ಆಗಿ ಈ ದುರಂತ ಸಂಭವಿಸಿದೆ.
ತಳಕು ಹೋಬಳಿಯಲ್ಲಿ ಹೆಚ್ಚುತ್ತಿರುವ ಅಸಹಜ ಸಾವುಗಳು:
ತಳಕು ಹೋಬಳಿ ವ್ಯಾಪ್ತಿಯಲ್ಲಿ ವಿದ್ಯುತ್ ಆಘಾತ, ಕೆರೆ-ಬಾವಿಗಳಲ್ಲಿ ಮುಳುಗಿ ಸಾವು, ರಸ್ತೆ ಅಪಘಾತ ಹಾಗೂ ಮಾನಸಿಕ ಖಿನ್ನತೆಯಿಂದ ಹದಿಹರೆಯದ ಯುವಕ-ಯುವತಿಯರು ಮತ್ತು ಬೇಸಿಗೆ ರಜೆ ಸಮಯದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಳ್ಳುತ್ತಿರುವುದು ಸರ್ವೇ ಸಾಮಾನ್ಯವಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಪರಿಶೀಲನೆಗೆ ಆಗ್ರಹ ಹಾಗೂ ತನಿಖೆಗೆ ಮನವಿ:
ಗ್ರಾಮೀಣ ಭಾಗದ ಬೋರ್ವೆಲ್, ಕೊಳವೆಬಾವಿ ಹಾಗೂ ಸಾರ್ವಜನಿಕ ನಲ್ಲಿಗಳ ವಿದ್ಯುತ್ ಸಂಪರ್ಕ ಹಾಗೂ ಸ್ಥಿತಿಗತಿಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಈ ಸರಣಿ ಸಾವುಗಳಿಗೆ ಶಾಶ್ವತ ತಡೆ ಒಡ್ಡುವವರು ಯಾರು ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ.
ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ, ಬೆಸ್ಕಾಂ, ತಾಲ್ಲೂಕು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ತಕ್ಷಣವೇ ಭೇಟಿ ನೀಡಿ ಘಟನೆಯ ಕುರಿತು ಸೂಕ್ತ ತನಿಖೆ ನಡೆಸಬೇಕು. ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವುದರ ಜೊತೆಗೆ, ಭವಿಷ್ಯದಲ್ಲಿ ಇಂತಹ ಅನಾಹುತಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಚಿತ್ರದುರ್ಗ ದಲಿತ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷರಾದ ಕೋಡಿಹಳ್ಳಿ ಟಿ. ಶಿವಮೂರ್ತಿ ಅವರು ಮನವಿ ಮಾಡಿದ್ದಾರೆ.




