ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಬೃಹತ್ ನೇಮಕಾತಿ ಪರ್ವ ಆರಂಭವಾಗಿದ್ದು, ಇದರ ಭಾಗವಾಗಿ 3,991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ಆಗಸ್ಟ್ 2ರಂದು ಲಿಖಿತ ಪರೀಕ್ಷೆ ನಡೆಯಲಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಪರೀಕ್ಷೆ ಬರೆಯುತ್ತಿರುವ ಎಲ್ಲಾ ಅಭ್ಯರ್ಥಿಗಳಿಗೆ ಶುಭಾಶಯ ಕೋರಿದ್ದು, ಪರೀಕ್ಷೆಯಲ್ಲಿ ಅಕ್ರಮ ಎಸಗಲು ಯತ್ನಿಸುವವರ ವಿರುದ್ಧ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಈ ನೇಮಕಾತಿಯಲ್ಲಿ ಉಳಿಕೆ ಮೂಲ ವೃಂದದಲ್ಲಿ 3,395 ಹಾಗೂ ಕಲ್ಯಾಣ ಕರ್ನಾಟಕ ವೃಂದದಲ್ಲಿ 596 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಪರೀಕ್ಷಾ ಸಮಯ ಮತ್ತು ಕೇಂದ್ರಗಳ ವಿವರ: ಉಳಿಕೆ ಮೂಲ ವೃಂದ:
ಸಮಯ: ಬೆಳಿಗ್ಗೆ 10.00 ರಿಂದ 11.30 ರವರೆಗೆ, ಪರೀಕ್ಷಾ ಕೇಂದ್ರಗಳು: ಒಟ್ಟು 884 ಕೇಂದ್ರಗಳು.
ಕಲ್ಯಾಣ ಕರ್ನಾಟಕ ವೃಂದ:
ಅಭ್ಯರ್ಥಿಗಳ ಅನುಕೂಲಕ್ಕಾಗಿ ಪರೀಕ್ಷಾ ಸಮಯವನ್ನು ಬದಲಾಯಿಸಲಾಗಿದ್ದು, ಸಂಜೆ 4.00 ರಿಂದ 5.30 ರವರೆಗೆ ಪರೀಕ್ಷೆ ನಡೆಯಲಿದೆ.
ಪರೀಕ್ಷಾ ಕೇಂದ್ರಗಳು: ಒಟ್ಟು 186 ಕೇಂದ್ರಗಳು
ಅಕ್ರಮ ಎಸಗಿದರೆ ಸರ್ಕಾರಿ ಕೆಲಸಕ್ಕೆ ಶಾಶ್ವತ ನಿಷೇಧ!:
ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕ, ನ್ಯಾಯಸಮ್ಮತ ಮತ್ತು ವಿಶ್ವಾಸಾರ್ಹವಾಗಿ ನಡೆಸಲು ಕಾಂಗ್ರೆಸ್ ಸರ್ಕಾರ ಅಗತ್ಯವಿರುವ ಎಲ್ಲಾ ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಪ್ರಮುಖ ಎಚ್ಚರಿಕೆ:
"ನೇಮಕಾತಿಯಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ವಂಚನೆಗೆ ಅವಕಾಶವಿಲ್ಲ. ಪರೀಕ್ಷೆಯಲ್ಲಿ ಅಕ್ರಮ ಎಸಗಲು ಪ್ರಯತ್ನಿಸುವವರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ, ಅಂತಹ ಅಭ್ಯರ್ಥಿಗಳನ್ನು ಭವಿಷ್ಯದಲ್ಲಿ ಯಾವುದೇ ಸರ್ಕಾರಿ ಹುದ್ದೆಯ ನೇಮಕಾತಿ ಪರೀಕ್ಷೆ ಬರೆಯದಂತೆ ಶಾಶ್ವತವಾಗಿ ನಿಷೇಧಿಸಲಾಗುವುದು."
ಪ್ರಿಯಾಂಕ್ ಖರ್ಗೆ, ಸಚಿವರು.
ಪ್ರಾಮಾಣಿಕವಾಗಿ ಸಿದ್ಧತೆ ನಡೆಸಿರುವ ಪ್ರತಿಯೊಬ್ಬ ಅರ್ಹ ಅಭ್ಯರ್ಥಿಗೂ ನ್ಯಾಯ ಒದಗಿಸುವುದು ಸರ್ಕಾರದ ಬದ್ಧತೆಯಾಗಿದೆ. ಅಭ್ಯರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ, ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪುವಂತೆ ಅವರು ಆಶಿಸಿದ್ದಾರೆ.



