ನ್ಯೂಸ್ ಪ್ರಿಂಟ್ ಬೆಲೆ ಹೆಚ್ಚಳ, ಜಿಎಸ್ ಟಿ ತೆರಿಗೆ ಹೊರೆ ಬೇರೆ: ವಿಜಯ ಸಂಕೇಶ್ವರ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮುದ್ರಣಕ್ಕೆ ಕಾಗದವೇ ಬಹಳ ಮುಖ್ಯ. ಅರಣ್ಯ ಸಂಪತ್ತು ಇದ್ದರೆ ಕಾಗದ ಉತ್ಪಾದನೆ ಆಗಲಿದೆ. ಆದರೆ ನ್ಯೂಸ್ ಪ್ರಿಂಟ್ ಬೆಲೆ ದುಬಾರಿಯಾಗಿರುವುದು ಒಂದು ಕಡೆಯಾದರೆ ಜಿಎಸ್ ಟಿ ತೆರಿಗೆ ಮುದ್ರಣ ಮಾಧ್ಯಮಕ್ಕೆ ಹೊರೆಯಾಗಿದೆ ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ಛೇರ‌್ಮನ್ ವಿಜಯ ಸಂಕೇಶ್ವರ ಬೇಸರ ವ್ಯಕ್ತ ಪಡಿಸಿದರು.

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟವು ಆಯೋಜಿಸಿದ್ದ ಪತ್ರಿಕಾ ವಿತರಕರ ನಾಲ್ಕನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಶೇ.70ರಷ್ಟು ನ್ಯೂಸ್ ಪ್ರಿಂಟ್ ಆಮದು ಮಾಡಿಕೊಳ್ಳಬೇಕಿದೆ. ಅದರ ಜೊತೆಗೆ ಜಿಎಸ್‌ಟಿ ತೆರಿಗೆ ಹೊರೆಯೂ ಹೆಚ್ಚಾಗಿದೆ. ಸಬ್ಸಿಡಿಯೂ ಸಿಗುತ್ತಿಲ್ಲ. ಈ ಬಗ್ಗೆ ಸರ್ಕಾರ ಗಮನಿಸಬೇಕು ಎಂದು ಹೇಳಿದರು.

ವಿಜಯ ಕರ್ನಾಟಕ ಪತ್ರಿಕೆ ಪ್ರಾರಂಭಿಸಿದಾಗ ನಾವು ಪ್ರತಿ ಜಿಲ್ಲಾ ಮಟ್ಟದಲ್ಲಿ ಪತ್ರಿಕಾ ವಿತರಕರ ಜೊತೆಗೆ ಸಭೆಗಳನ್ನು ನಡೆಸುವ ಮೂಲಕ ಅವರ ಅಹವಾಲುಗಳನ್ನು ಕೇಳುವ ಪ್ರಕ್ರಿಯೆ ಶುರು ಮಾಡಿದ್ದೆವು. ನಾವು ಈ ಉದ್ಯಮಕ್ಕೆ ಬಂದ ಮೇಲೆ ಪತ್ರಿಕಾ ವಿತರಕರಿಗಿದ್ದ ಸೌಲಭ್ಯಗಳು ಉತ್ತಮಗೊಳ್ಳಲು ಸಾಧ್ಯವಾಗಿದೆ. ಯಾವುದೇ ವೃತ್ತಿಯಲ್ಲಿ ಕೀಳಿರಿಮೆ ಇಟ್ಟುಕೊಳ್ಳದೆ ಕೆಲಸ ಮಾಡಬೇಕು ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ಮಳೆ, ಚಳಿ, ಬಿಸಿಲೆನ್ನದೆ ಕೆಲಸ ಮಾಡುವ ಪತ್ರಿಕಾ ವಿತರಕರ ಬಗ್ಗೆ ಸರ್ಕಾರದ ಗಮನ ಸೆಳೆದು ಒತ್ತಡ ಹಾಕಿದ್ದರಿಂದಲೇ ಅವರಿಗಾಗಿ ಕಾರ್ಮಿಕ ಇಲಾಖೆಯಲ್ಲಿ ಯೋಜನೆ ಜಾರಿಗೆ ಬಂತು. ರಾಜ್ಯೋತ್ಸವ ಪ್ರಶಸ್ತಿ ಕೂಡ ಬಂತು ಎಂದರು.

ತಮ್ಮ ಪಾಡಿಗೆ ಅಲ್ಲಲ್ಲಿ ಹಂಚಿಹೋಗಿದ್ದ ಪತ್ರಿಕಾ ವಿತರಕರನ್ನು ಒಂದೇ ಸೂರಿನಡಿ ಸೇರಿಸಿ ಸಂಘಟನೆ ಮಾಡುವ ನಿಟ್ಟಿನಲ್ಲಿ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಅವರ ನೇತೃತ್ವದ ತಂಡದ ಶ್ರಮ ಅಪಾರವಾದದ್ದು. ಪರಿಶ್ರಮದಿಂದ ಕೆಲಸ ಮಾಡಿದರೆ ಯಾವುದೇ ವೃತ್ತಿಯೂ ಕೀಳಲ್ಲ. ಅದನ್ನು ಅರಿತು, ಸಂಘಟಿತರಾದರೆ ಮಾತ್ರ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರಾಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ ವಿತರಕರು ಇಷ್ಟು ದಿನ ಮಲಗಿದ್ದರು. ಆಗ ಎಚ್ಚೆತ್ತುಕೊಂಡು ಇಡೀ ರಾಜ್ಯದಲ್ಲಿ ಸಂಘಟನೆ ಮಾಡುತ್ತಿದ್ದಾರೆ. ಸಂಘಟನೆ ಇದ್ದರೆ ತಮ್ಮ ಬೇಡಿಕೆಗಳನ್ನು ಸುಲಭವಾಗಿ ಈಡೇರಿಸುಕೊಳ್ಳಬಹುದು ಎಂದು ತಿಳಿಸಿದರು.

ಪತ್ರಿಕಾ ವಿತರಕರು ಪತ್ರಕರ್ತರು ಬೇರೆಯಲ್ಲ, ಎಲ್ಲರೂ ಒಂದೇ, ಪತ್ರಕರ್ತ-ವಿತರಕ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಯಾರೊಬ್ಬರು ಮೇಲೂ ಕೀಳಲ್ಲ ಸಮಾಜದ ಭಾಗವಾಗಿ ಎಲ್ಲರೂ ಕೆಲಸ ಮಾಡುತ್ತಿದ್ದು ಒಂದೇ ಎನ್ನುವ ಭಾವನೆ ಇದೆ ಎಂದು ಹೇಳಿದರು.

 

- Advertisement -  - Advertisement - 
Share This Article
error: Content is protected !!
";