ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಕನಿಷ್ಠ ತಾಪಮಾನ 14-15° ಸೆಲ್ಸಿಯಸ್ ದಾಖಲಾಗಿದೆ. ಮುಂದಿನ ಮೂರು ದಿನ ಬೆಂಗಳೂರು, ಚಿತ್ರದುರ್ಗ, ತುಮಕೂರು, ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ಇದೇ ರೀತಿಯ ಚಳಿ, ಚಳಿಗಾಳಿ ಮುಂದುವರೆಯಲಿದ್ದು ಶೀತದ ವಾತಾವರಣ ಉಂಟಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ತೀವ್ರ ಚಳಿ ಇರುವ ಹಲವು ಜಿಲ್ಲೆಗಳಿಗೆ ಆರೆಂಜ್, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬಾಗಲಕೋಟೆಗೆ ಆರೆಂಜ್ ಅಲರ್ಟ್ ಘೋಷಿಸಿದ್ದರೆ, ಚಿಕ್ಕಮಗಳೂರು, ಗದಗ ಹಾಗೂ ಮೈಸೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮೈಕೊರೆಯುವ ಚಳಿ ಹಿನ್ನೆಲೆಯಲ್ಲಿ ನಗರದಲ್ಲಿ ಬೆಳಗ್ಗೆ ವಾಕಿಂಗ್‌ಗೆ ತೆರಳಲು ಜನ ಹಿಂದೇಟು ಹಾಕುತ್ತಿದ್ದಾರೆ. ಲಾಲ್‌ಬಾಗ್, ಕಬ್ಬನ್ ಪಾರ್ಕ್‌ಗಳಲ್ಲಿ ವಾಯುವಿಹಾರಕ್ಕೆ ಬರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ.
ಮೈಕೊರೆವ ಚಳಿಯ ಪ್ರಮಾಣ ಡಿಸೆಂಬರ್ 17ರ ನಂತರ ಕಡಿಮೆಯಾಗುವ ನಿರೀಕ್ಷೆಯಿದ್ದು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ವಿಶೇಷವಾಗಿ ಮಕ್ಕಳು ಹಾಗೂ ಹಿರಿಯರು ಆರೋಗ್ಯದೆಡೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮುಂಜಾನೆ ವಾಕಿಂಗ್ ಮತ್ತು ವ್ಯಾಯಾಮವನ್ನು ತಾತ್ಕಾಲಿಕವಾಗಿ ತಪ್ಪಿಸಿ, ಬೆಚ್ಚನೆಯ ಉಡುಪು ಧರಿಸಿ ಆದಷ್ಟು ಬಿಸಿ ಆಹಾರ ಸೇವಿಸುವಂತೆ ವೈದ್ಯರು ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಭಾನುವಾರ ಬಿದರ್ನಲ್ಲಿ ಕನಿಷ್ಠ 7.4°C ಉಷ್ಣಾಂಶ ಕಂಡು ಬಂದಿದ್ದು, ಹಾಸನದಲ್ಲಿ 8.7°C, ಆಗುಂಬೆಯಲ್ಲಿ 9.3°C, ಧಾರವಾಡದಲ್ಲಿ 9.5°C, ವಿಜಯಪುರದಲ್ಲಿ 10°C, ಹೊನ್ನಾವರದಲ್ಲಿ ಕನಿಷ್ಠ 19.13°C, ಬೆಂಗಳೂರಿನ ಎಚ್ಎಎಲ್ ವ್ಯಾಪ್ತಿಯಲ್ಲಿ 13.4°C, ನಗರದ ಇತರೆಡೆ ಸರಾಸರಿ 14.5°C ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

