ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸುಳ್ಳು ಭರವಸೆಗಳ ಮಹಾಪೂರ ಹರಿಸಿ ಅಧಿಕಾರಕ್ಕೇರಿದ ಕರ್ನಾಟಕ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳಲ್ಲಿ ಅತಂತ್ರ ಸ್ಥಿತಿಯಲ್ಲಿ ಬದುಕು ನಡೆಸುತ್ತಿರುವ 28,000 ಗುತ್ತಿಗೆ ಆಧಾರದಲ್ಲಿ 15-20 ವರ್ಷಗಳಿಂದ ಕೆಲಸ ಮಾಡುತ್ತಿರುವ NHM ನೌಕರರನ್ನು ಖಾಯಂ ಗೊಳಿಸುವ ವಾಗ್ದಾನ ನೀಡಿತ್ತು . ಅದನ್ನು ಮರೆತಂತೆ ವರ್ತಿಸುತ್ತಿರುವ ಸರ್ಕಾರ ಸಾವಿರಾರು ನೌಕರರ ಕುಟುಂಬ ಆತಂಕದಿಂದ ದಿನದೊಡುವ ಪರಿಸ್ಥಿತಿಗೆ ಕಾರಣವಾಗಿದೆ.
ಅಲ್ಲದೇ ಈ ಸರ್ಕಾರ ತನ್ನ ಬೊಕ್ಕಸ ಬರಿದಾಗಿಸಿಕೊಂಡು ಕಳೆದ ಎರಡು ತಿಂಗಳಿಂದಲೂ ಸಂಬಳ ನೀಡದೇ NHM ನೌಕರರನ್ನು ಸಾಲಗಾರರನ್ನಾಗಿಸಲು ಹೊರಟಿರುವುದು ನಾಡಿನ ದೌರ್ಭಾಗ್ಯವಲ್ಲದೇ ಬೇರೇನೂ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ನಾಡಿನ ಜನರ ಆರೋಗ್ಯ ಸೇವೆ ಸಲ್ಲಿಸುತ್ತಿರುವ NHM ನೌಕರರಿಗೆ ಈ ಕೂಡಲೇ ಸಂಬಳ ಬಿಡುಗಡೆ ಮಾಡುವ ಜತೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ಇತರ ರಾಜ್ಯಗಳಾದ ಹರಿಯಾಣ, ರಾಜಸ್ಥಾನ, ಬಿಹಾರ ರಾಜ್ಯಗಳಲ್ಲಿ ಖಾಯಂ ಗೊಳಿಸಿದಂತೆ ರಾಜ್ಯದಲ್ಲಿಯೂ ಜಾರಿಗೊಳಿಸಿ ತನ್ನ ನೈತಿಕತೆ ಉಳಿಸಿಕೊಳ್ಳಲಿ, ಇಲ್ಲವಾದರೆ ಇದರ ಪರಿಣಾಮದ ಬಿಸಿ ರಾಜ್ಯ ಸರ್ಕಾರಕ್ಕೆ ತಟ್ಟಲಿದೆ ಎಂದು ಎಚ್ಚರಿಸಬಯಸುವೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.