ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಜಮ್ಮು – ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿ ಪ್ರಕರಣವನ್ನ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಣಮಿಸಿದ್ದು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕೈಗೆತ್ತಿಕೊಂಡಿದೆ.
ಉಗ್ರ ಕೃತ್ಯ ನಡೆದ ಸ್ಥಳ, ಉಗ್ರರ ಪ್ರವೇಶ ಮತ್ತು ನಿರ್ಗಮನದ ಕುರುಹುಗಳ ಕುರಿತು ಈಗಾಗಲೇ ಎನ್ಐಎ ಅಧಿಕಾರಿಗಳು ಪರಿಶೀಲನೆ ನಡೆಸಿ ಕೆಲ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.
ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಔಪಚಾರಿಕವಾಗಿ ಪ್ರಕರಣದ ತನಿಖೆಯನ್ನ ವಹಿಸಿಕೊಳ್ಳುವ ಪ್ರಕ್ರಿಯೆಯನ್ನ ಪ್ರಾರಂಭಿಸಲಾಗಿದೆ ಎಂದು ಎನ್ಐಎ ತಿಳಿಸಿದೆ.
ಪಹಲ್ಗಾಮ್‌ನಲ್ಲಿ ನಡೆದಿರುವ ಭಯೋತ್ಪಾದಕರ ದಾಳಿ ಕುರಿತು ಬುಧವಾರದಿಂದಲೇ ಮೊಕ್ಕಾಂ ಹೂಡಿರುವ ಎನ್ಐಎ ತಂಡಗಳು, ಸಾಕ್ಷ್ಯಗಳ ಹುಡುಕಾಟವನ್ನು ತೀವ್ರಗೊಳಿಸಿವೆ.
ಐಜಿ, ಡಿಐಜಿ ಮತ್ತು ಭಯೋತ್ಪಾದನಾ ನಿಗ್ರಹ ದಳದ ಎಸ್‌ಪಿ ಅವರ ಮೇಲ್ವಿಚಾರಣೆಯಲ್ಲಿರುವ ತಂಡಗಳು, ಬೈಸರನ್ ಕಣಿವೆಯಲ್ಲಿ ನಡೆದ ಭಯಾನಕ ದಾಳಿಯನ್ನ ನೋಡಿರುವ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆಯುತ್ತಿವೆ. ಕಾಶ್ಮೀರದ ಪಹಲ್ಗಾಮ್‌ದಾಳಿಗೆ ಕಾರಣವಾದ ಅಂಶಗಳನ್ನ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ವಿಧಿವಿಜ್ಞಾನ ಮತ್ತು ಇತರ ತಜ್ಞರ ಸಹಾಯದಿಂದ ತಂಡಗಳು ಇಡೀ ಪ್ರದೇಶವನ್ನು ಕೂಲಂಕುಷವಾಗಿ ಪರಿಶೀಲಿಸುತ್ತಿವೆ ಎಂದು ಎಂದು ಎನ್ಐಎ ಮಾಹಿತಿ ನೀಡಿದೆ.
ಏಪ್ರಿಲ್ 22ರಂದು ಜಮ್ಮು – ಕಾಶ್ಮೀರದ ಬೈಸರನ್ ಕಣಿವೆಯ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರವಾಸಿಗರು ಸೇರಿದಂತೆ 26 ಜನ ಅಮಾಯಕರು ಸಾವನ್ನಪ್ಪಿದರು. 20 ಜನ ಗಾಯಗೊಂಡಿದ್ದರು. ಪ್ರಕರಣದ ತನಿಖೆಯನ್ನ ಎನ್ಐಎಗೆ ವಹಿಸಿ ಕೇಂದ್ರ ಗೃಹ ಸಚಿವಾಲಯ ಆದೇಶಿಸಿತ್ತು.