ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಮುಖ್ಯಮಂತ್ರಿ ದಿ. ಎಸ್.ನಿಜಲಿಂಗಪ್ಪ ಅವರು ದೇಶಕ್ಕೆ ಮಾಡಿದ ಸೇವೆ ನಮಗೆ ಆದರ್ಶ. ಅವರ ಆದರ್ಶಗಳನ್ನು ನಾವು ಮೈಗೂಡಿಸಿಕೊಂಡು ರಾಜ್ಯದ ಸೇವೆಯನ್ನು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮುಖ್ಯಮಂತ್ರಿ ಅವರು ಮಾಜಿ ಮುಖ್ಯಮಂತ್ರಿ ದಿ.ಎಸ್.ನಿಜಲಿಂಗಪ್ಪ ಅವರ ಪುಣ್ಯಸ್ಮರಣೆಯ ಅಂಗವಾಗಿ ಶುಕ್ರವಾರ ವಿಧಾನಸೌಧದ ಬಳಿ ಇರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ನಮನ ಸಲ್ಲಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.
ನಿಜಲಿಂಗಪ್ಪನವರು ಅವಿಭಜಿತ ಕಾಂಗ್ರೆಸ್‌ನ ಎಐಸಿಸಿ ಅಧ್ಯಕ್ಷರಾಗಿದ್ದವರು. ಪ್ರತಿ ವರ್ಷ ಅವರ ಜನ್ಮದಿನ ಹಾಗೂ ಪುಣ್ಯತಿಥಿಯಂದು ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವವನ್ನು ಸರ್ಕಾರ ಸಲ್ಲಿಸುತ್ತಾ ಬಂದಿದೆ.
ದೇಶ ಕಂಡ ಅಪ್ರತಿಮ ನಾಯಕರು ನಿಜಲಿಂಗಪ್ಪನವರು. ಏಕೀಕರಣದ ಹೋರಾಟದಲ್ಲಿ ಭಾಗವಹಿಸಿ, ಕರ್ನಾಟಕದ ಏಕೀಕರಣದ ನಂತರ ಮೊದಲನೇ ಮುಖ್ಯಮಂತ್ರಿಗಳಾದರು. ಜನಪರ ಕಾಳಜಿಯಿದ್ದ ಇವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಇವರೊಬ್ಬ ಪ್ರಾಮಾಣಿಕ ರಾಜಕಾರಣಿ ಎಂದು ಸಿದ್ದರಾಮಯ್ಯ ತಿಳಿಸಿದರು.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು, ಭಾರತೀಯರನ್ನು ಬಂಧಮುಕ್ತವಾಗಿಸುವಲ್ಲಿ ಯಶಸ್ವಿಯಾದ ನಿಜಲಿಂಗಪ್ಪನವರು ಅರೆಕ್ಷಣವೂ ವಿರಮಿಸಿದೆ ಕನ್ನಡ ಭಾಷಿಗರೆಲ್ಲರನ್ನೂ ಒಂದೇ ಸೂರಿನಡಿ ಒಟ್ಟುಗೂಡಿಸುವ ಕರ್ನಾಟಕ ಏಕೀಕರಣ ಚಳವಳಿಯ ನೇತೃತ್ವ ವಹಿಸಿಕೊಂಡು, ಅವಿರತ ಶ್ರಮಿಸಿದರು.
ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿ ಅವರು ನಾಡಿನ ಅಭಿವೃದ್ಧಿಗೆ ನೀಡಿದ ಕೊಡುಗೆಗಳು ಇಂದಿಗೂ ಜನಮಾನಸದಲ್ಲಿ ಉಳಿದಿದೆ. ಪ್ರಜಾಸತ್ತಾತ್ಮಕ, ಜಾತ್ಯತೀತ ಮನೋಭಾವದ ಮುತ್ಸದ್ದಿ ನಾಯಕ, ಶರಣರ ಚಿಂತನೆಗಳ ಹಾದಿಯಲ್ಲಿ ನಾಡಕಟ್ಟುವ ಕನಸು ಕಂಡ ಮಹಾಚೇತನ ಎಸ್.ನಿಜಲಿಂಗಪ್ಪನವರ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಅವರ ಜೀವನ – ಆದರ್ಶಗಳನ್ನು ನೆನೆದು, ನಮಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

