ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅತಿವೃಷ್ಟಿಯಿಂದ ಬೆಳೆಹಾನಿಗೊಳಗಾದ ಪ್ರದೇಶಗಳ ಭೇಟಿ ಹಾಗೂ ರೈತರಿಗೆ ಸಾಂತ್ವನ ಹೇಳುವ ನಿಟ್ಟಿನಲ್ಲಿ ರಾಜ್ಯ ಪ್ರವಾಸದ ಭಾಗವಾಗಿ ಮಂಗಳವಾರ ಬೀದರ್ ಜಿಲ್ಲೆಯ ಮರಕಲ್ ಹಾಗೂ ಅಲಿಯಂಬರ್ ಗ್ರಾಮಗಳಿಗೆ ಭೇಟಿ ನೀಡಿ, ರೈತರ ಜಮೀನಿಗೆ ಇಳಿದು ರೈತರ ಸಂಕಷ್ಟದ ಜೀವನ ಅರ್ಥ ಮಾಡಿಕೊಂಡೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಪ್ರಮುಖವಾಗಿ ಮರಕಲ್ ಗ್ರಾಮದಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಸೋಯಾಬಿನ್, ತೊಗರಿ, ಅಲಸಂದೆ ಬೆಳೆಗಳ ವೀಕ್ಷಣೆ ಮಾಡಿ, ರೈತರಿಂದ ಮಾಹಿತಿ ಪಡೆದುಕೊಂಡರು.
ಈ ವೇಳೆ ರೈತರ ಕಣ್ಣಂಚಿನಲ್ಲಿನ ನೀರು ಕಂಡು ನಿಖಿಲ್ ಕೂಡ ಭಾವುಕರಾದರು. ಬೀದರ್ ಜಿಲ್ಲೆಯಲ್ಲಿ ಸುಮಾರು 80 ಸಾವಿರ ಹೆಕ್ಟೇರ್ ಬೆಳೆನಾಶವಾಗಿದ್ದು, ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಸರ್ಕಾರ ಮಾತ್ರ ಗಾಢನಿದ್ರಗೆ ಜಾರಿರುವುದು ವಿಪರ್ಯಾಸ. ರಾಜ್ಯದ ಕೃಷಿ ಸಚಿವರಿಗೆ ಕಲಬುರಗಿ, ಬೀದರ್ ನಮ್ಮ ರಾಜ್ಯದ ಜಿಲ್ಲೆಗಳು ಎಂಬುದು ಇನ್ನೂ ಅರಿವಿಗೆ ಬಂದಿಲ್ಲವೇನೋ ಎಂದು ನಿಖಿಲ್ ವಾಗ್ದಾಳಿ ಮಾಡಿದರು.
ಕೃಷಿ ಇಲಾಖೆ- ಕಂದಾಯ ಇಲಾಖೆ ಜಂಟಿಯಾಗಿ ಸರ್ವೇ ಕಾರ್ಯ ನಡೆಸದೇ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಆದಷ್ಟು ಬೇಗ ಸರ್ಕಾರ ಗಾಢ ನಿದ್ರೆಯಿಂದ ಎಚ್ಚೆತ್ತು, ರೈತರಿಗೆ ಶೀಘ್ರವಾಗಿ ಎಕರೆಗೆ 25 ಸಾವಿರ ಪರಿಹಾರ ವಿತರಿಸಬೇಕೆಂದು ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.
ಸಂಕಷ್ಟದಲ್ಲಿರುವ ರೈತರು ಉಳಿಯಬೇಕಾದರೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ರೈತರಿಗೆ ಕನಿಷ್ಠ 902 ಕೋಟಿಗಳಷ್ಟು ಪರಿಹಾರ ನೀಡಬೇಕು ಎಂದು ಅವರು ಆಗ್ರಹ ಮಾಡಿದರು.
ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸೌಜನ್ಯಕ್ಕಾದರು ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ, ರೈತರಿಗೆ ಸಾಂತ್ವನ, ಕಾಳಜಿ ತೋರಿಸುವ ಕೆಲಸ ಮಾಡಬೇಕಿತ್ತು. ಅದು ಇದುವರೆಗೂ ಆಗಿಲ್ಲ. ಮಾಜಿ ಪ್ರಧಾನಮಂತ್ರಿ ಹೆಚ್.ಡಿ ದೇವೇಗೌಡ ಅವರ ಕುಟುಂಬ ಅಧಿಕಾರ ಇರಲಿ, ಬಿಡಲಿ ರೈತರ ಪರವಾಗಿ ಕೊನೆಯ ಉಸಿರಿರುವ ವರೆಗೆ ಧ್ವನಿ ಎತ್ತುತ್ತೇವೆ ಎಂದು ನಿಖಿಲ್ ತಿಳಿಸಿದರು.

ಈ ಸಂದರ್ಭದಲ್ಲಿ ಬೀದರ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲಪೂರ್ , ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ಮುಖಂಡರಾದ ಮಲ್ಲಿಕಾರ್ಜುನ ಖೂಬಾ, ಸೂರ್ಯಕಾಂತ ನಾಗಮಾರಪಳ್ಳಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು , ರೈತ ಬಂಧುಗಳು ಉಪಸ್ಥಿತರಿದ್ದರು.

